Home latest Sunita Williams: ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ ಘೋಷಣೆ!!

Sunita Williams: ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ ಘೋಷಣೆ!!

Sunita Williams: ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಪ್ರಸಿದ್ಧ ಗಗನಯಾತ್ರಿ, ಬಾಹ್ಯಾಕಾಶದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಭಾರತದ ಹೆಮ್ಮೆಯ ಪುತ್ರಿ ಸುನೀತಾ ವಿಲಿಯಮ್ಸ್ ಇದೀಗ ಬರೋಬ್ಬರಿ 27 ವರ್ಷಗಳ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೆಲಸದ ನಿಮಿತ್ತ ಹೋಗಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​, ಯಾರೂ ನಿರೀಕ್ಷೆ ಮಾಡದಂತೆ ಅಲ್ಲಿಯೇ ಸಿಲುಕಬೇಕಾಯಿತು. ಹೋಗಿದ್ದು ಕೇವಲ ಒಂದು ವಾರದ ಕೆಲಸಕ್ಕಾಗಿ ಆದರೆ 9 ತಿಂಗಳು ಅಲ್ಲಿಯೇ ಸಿಲುಕಿದ್ದರು. ಅವರು ಹೋಗಿದ್ದ ಸ್ಟಾರ್​ಲೈನರ್​ ಕ್ಯಾಪ್ಸುಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಾಪಸ್​ ಬರಲು ಸಾಧ್ಯವಾಗಲಿಲ್ಲ.​ ಸಾಕಷ್ಟು ಬಾರಿ ಪ್ರಯತ್ನಿಸಿದ್ರೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇತ್ತು. ಇತ್ತ ಭೂಮಿಗೆ ಬರುವ ಆಸೆ ಅನೇಕ ಬಾರಿ ನಿರಾಸೆಯಾಗಿ, ಗಗನಯಾತ್ರಿಗಳ ನಿರೀಕ್ಷೆ ಹೆಚ್ಚಾಗುತ್ತಲೇ ಇತ್ತು. ಕೊನೆಗೂ ಭೂಮಿಗೆ ಬಂದಿಳಿದಿದ್ದರು. ಇದೀಗ ಅವರು ನಿವೃತ್ತಿಯನ್ನು ಘೋಷಿಸಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ 27 ವರ್ಷಗಳ ಕಾಲ ಅಪೂರ್ವ ಹಾಗೂ ಪ್ರೇರಣಾದಾಯಕ ವೃತ್ತಿಜೀವನವನ್ನು ನಡೆಸಿದ ಖ್ಯಾತ ಗಗನಯಾತ್ರಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರು ನಿವೃತ್ತಿಯಾಗಿರುವ ಬಗ್ಗೆ ನಾಸಾ ಅಧಿಕೃತವಾಗಿ ಘೋಷಿಸಿದೆ. ಅವರ ನಿವೃತ್ತಿ 2025ರ ಡಿಸೆಂಬರ್ 27ರಿಂದ ಜಾರಿಗೆ ಬಂದಿದೆ ನಾಸಾ ಬುಧವಾರ (ಅಮೆರಿಕದಲ್ಲಿ ಮಂಗಳವಾರ) ಪ್ರಕಟಣೆ ಹೊರಡಿಸಿದೆ.

ಸುನೀತಾ ವಿಲಿಯಮ್ಸ್‌ ಅವರು ಬಾಹ್ಯಾಕಾಶಯಾನದಲ್ಲಿ ಅಮೋಘ ಕಾರ್ಯವನ್ನು ಸಲ್ಲಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುನೀಯಾ ವಿಲಿಯಮ್ಸ್‌ ಅವರ ಸೇವೆ ಅಸಾಧಾರಣವಾದ್ದದ್ದು. ಅವರು ಇತರರಿಗೆ ದಾರಿದೀಪ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರ ನಾಯಕತ್ವವು ಮುಂದಿನ ದಿನಗಳಲ್ಲಿ ಚಂದ್ರ ಮತ್ತು ಮಂಗಳ ಗ್ರಹದತ್ತ ಕೈಗೊಳ್ಳಲಿರುವ ಮಿಷನ್‌ಗಳಿಗೆ ಬಲವಾದ ಭದ್ರ ಅಡಿಪಾಯ ಹಾಕಿದೆ. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ಅವರು ನೀಡಿದ ಸೇವೆಗೆ ಅಭಿನಂದನೆಗಳು ಎಂದು ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್ ಸುನೀತಾ ಅವರನ್ನು ಕೊಂಡಾಡಿದ್ದಾರೆ.