Kerala: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬಸ್ ಒಂದು ತುಂಬಾ ರಶ್ ಆಗಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದು, ವಿಡಿಯೋದಲ್ಲಿದ್ದ ಅಮಾಯಕ ವ್ಯಕ್ತಿ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯಂತ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಪುರುಷರ ಸಂಘ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಹೌದು, ಗೋವಿಂದಪುರಂ ನಿವಾಸಿಯಾಗಿದ್ದ 42 ವರ್ಷದ ಯು.ದೀಪಕ್ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೀಪಕ್ ಬೆಳಗ್ಗೆ 7 ಗಂಟೆ ಸುಮಾರಿಗೆ ಪೋಷಕರು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಲವು ಬಾರಿ ಬಾಗಿಲು ಬಡಿದು ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತಂಕಗೊಂಡ ಪೋಷಕರು ನೆರೆಮನೆಯವರ ನೆರವಿನೊಂದಿಗೆ ಬಾಗಿಲು ತೆರೆದಾಗ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿತ್ತು. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಯುವತಿ ವೈರಲ್ ಮಾಡಿದ್ದ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡ ತಕ್ಷಣ, ಆ ವ್ಯಕ್ತಿಯನ್ನು ಆನ್‌ಲೈನ್‌ನಲ್ಲಿ ತೀವ್ರವಾಗಿ ನಿಂದಿಸಲಾಯಿತು. ಇದು ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಅದನ್ನು ನಿಭಾಯಿಸಲು ಸಾಧ್ಯವಾಗದೆ ಆ ವ್ಯಕ್ತಿ ಈ ಕಠಿಣ ಕ್ರಮ ತೆಗೆದುಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಪುರುಷರ ಸಂಘ ಇದೀಗ ಕೇರಳದ ಹೈಕೋರ್ಟ್ ಮೆಟ್ಟಿಲೇರಿದೆ. ಯಸ್, ಕೋಝಿಕ್ಕೋಡ್ ಜಿಲ್ಲೆಯ ಗೋವಿಂದಪುರಂ ಮೂಲದ ದೀಪಕ್ ಸಾವಿನ ಪ್ರಕರಣದಲ್ಲಿ ನ್ಯಾಯಕ್ಕಾಗಿ ಪುರುಷರ ಸಂಘವು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ. ಹೈಕೋರ್ಟ್ಗೆ ನೀಡಿರುವ ದೂರಿನಲ್ಲಿ ಸಿಬಿಐ ಅಥವಾ ಅಪರಾಧ ವಿಭಾಗದ ತನಿಖೆಗೆ ಸಂಘವು ಒತ್ತಾಯಿಸಿದೆ. ಆರೋಪಿ ಶಿಮ್ಜಿತಾ ಮುಸ್ತಫಾ ಅವರನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮಹಿಳೆ ವಿದೇಶಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಆಕೆಯ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಬೇಕು. ಬಸ್ಸಿನಲ್ಲಿರುವ ವಿಡಿಯೋವನ್ನು ಮಹಿಳೆಯ ಮೊಬೈಲ್ ಫೋನ್‌ನಲ್ಲಿ ಎಡಿಟ್ ಮಾಡಲಾಗಿದೆ. ಆದ್ದರಿಂದ, ಫೋನ್ ಅನ್ನು ವಶಪಡಿಸಿಕೊಂಡು ಪರಿಶೀಲಿಸಬೇಕು. ನಿಜ ಹೇಳಬೇಕೆಂದರೆ, ದೀಪಕ್ ಆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬುದು ಸುಳ್ಳು ಪ್ರಚಾರ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮೃತ ದೀಪಕ್ ಅವರ ಮನೆಗೆ ಭೇಟಿ ನೀಡಿದ ನಂತರ, ಪುರುಷರ ಸಂಘದ ಪ್ರತಿನಿಧಿ ರಾಹುಲ್ ಈಶ್ವರ್, ದೀಪಕ್ ಅವರ ಕುಟುಂಬಕ್ಕೆ 3.17 ಲಕ್ಷ ರೂ.ಗಳ ಪರಿಹಾರ ಹಣವನ್ನು ಹಸ್ತಾಂತರಿಸಲಾಗಿದೆ. ಪುರುಷರಿಗೆ ಸಹಾಯ ಮಾಡಲು ನಮ್ಮ ಸಂಘವು 24 ಗಂಟೆಗಳ ಫೋನ್ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ರಾಹುಲ್ ಹೇಳಿದ್ದಾರೆ.












