ಪುತ್ತೂರು: ವ್ಯಕ್ತಿಯೋರ್ವರು ಕೋರ್ಟ್ ಹಾಲ್‌ನಲ್ಲಿ ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಇಂದು (ಜ.22) ಮಧ್ಯಾಹ್ನ ನಡೆದಿದೆ.
ಕಾವು ನಿವಾಸಿ ರವಿ (35) ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ ವ್ಯಕ್ತಿ.
ಪತ್ನಿ ಜೊತೆಗಿನ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬರು ಪುತ್ತೂರಿನ ನ್ಯಾಯಾಲಯದಲ್ಲಿ ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಡೆದಿದೆ.
ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಜಗಳ ನಡೆದಿದ್ದು, ಎರಡು ದಿನಗಳ ಹಿಂದೆ ಪತ್ನಿಯ ಕತ್ತು ಹಿಸುಕಿ ಕೊಲೆಗೆ ಯತ್ನ ಮಾಡಿದ್ದ. ಈ ವಿಚಾರ ಗಂಡ ಹೆಂಡತಿ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಇಬ್ಬರಿಗೂ ಬುದ್ಧಿ ಮಾತು ಹೇಳಿ ಕಳುಹಿಸಿದ್ದರು.
ಮಹಿಳೆ ಮೇಲೆ ಕೈ ಮಾಡಿದರೆ ಕೇಸು ದಾಖಲು ಮಾಡುವುದಾಗಿ ಸಂಪ್ಯ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಪೊಲೀಸರ ಮಾತನ್ನು ಕೇಳದೆ ವಿಚ್ಛೇದನದ ಮಾತುಗಳನ್ನು ಹೇಳಿದ್ದರು. ಇದರಂತೆ ರವಿಗೆ ಇಂದು ಸಂಪ್ಯ ಠಾಣೆಗೆ ಬರುವಂತೆ ಪೊಲೀಸರು ತಿಳಿಸಿದ್ದರು.
ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದಿದ್ದು, ಜಡ್ಜ್ ಹಾಲ್‌ನಲ್ಲಿಯೇ ವಿಷ ಸೇವನೆ ಮಾಡಿದ್ದಾನೆ. ನಂತರ ನ್ಯಾಯಾಲಯದಲ್ಲಿಯೇ ವಾಂತಿ ಮಾಡಿದ್ದಾನೆ. ಕೂಡಲೇ ಅಲ್ಲಿನ ಸಿಬ್ಬಂದಿ, ಸಾರ್ವಜನಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ವ್ಯಕ್ತಿಯನ್ನು ರವಾನೆ ಮಾಡಿದ್ದು, ಗೇರು ತೋಟಕ್ಕೆ ಸಿಂಪಡಿಸುವ ಕೀಟನಾಶಕವನ್ನು ರವಿ ಸೇವಿಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಈತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗುತ್ತಿದೆ ಎಂದು ವರದಿಯಾಗಿದೆ.















