

ಹೊಸದಿಲ್ಲಿ: 2027ರ ಜನಗಣತಿಯ ಅಧಿಕೃತ ಪ್ರಶ್ನಾವಳಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಏಪ್ರಿಲ್‌ನಲ್ಲಿ ಆರಂಭವಾಗಲಿರುವ ಮೊದಲ ಹಂತದ ಮನೆಗಣತಿ ಕುರಿತು ಪ್ರಶ್ನಾವಳಿಯನ್ನು ಕೇಂದ್ರ ಗೃಹ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದೆ.
ವಿವಿಧ ವಿಷಯ ಒಳಗೊಂಡ 33 ಅಂಶಗಳನ್ನು ಒಳಗೊಂಡ ಪ್ರಶ್ನಾವಳಿ ಬಿಡುಗಡೆ ಮಾಡಲಾಗಿದೆ. ವಾಸಸ್ಥಳ, ಮನೆಯ ಸಂಖ್ಯೆ, ಮನೆಯಲ್ಲಿರುವ ವಸ್ತುಗಳ ಸಂಖ್ಯೆ, ಮನೆಯ ಸ್ಥಿತಿಗತಿ, ವಾಸವಿರುವ ಜನರ ಸಂಖ್ಯೆ, ಮನೆಯ ಯಜಮಾನರ ಹೆಸರು, ಮನೆಯಲ್ಲಿ ಬಳಸುವ ನೀರಿನ ಮೂಲ, ವಿದ್ಯುತ್ ಸಂಪರ್ಕ, ಎಲ್‌ಪಿಜಿ, ಪಿಎನ್‌ಜಿ ಸಂಪರ್ಕ ಮಾಹಿತಿ, ಮನೆಯಲ್ಲಿರುವ ರೇಡಿಯೊ, ಟಿವಿ, ಇಂಟರ್‌ನೆಟ್ ಸಂಪರ್ಕ, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಕೆ, ಮೊಬೈಲ್ ಅಥವಾ ಸ್ಮಾರ್ಟ್ ಪೋನ್ ಬಳಕೆ, ಸೈಕಲ್, ಬೈಕ್, ಕಾರು ಅಥವಾ ಇತರೆ ವಾಹನಗಳ
ಸಂಖ್ಯೆ, ಮನೆಯಲ್ಲಿ ಬಳಸುವ ಧಾನ್ಯಗಳು ಅಥವಾ ಆಹಾರ ಪದಾರ್ಥಗಳ ಮೂಲ, ಮೊಬೈಲ್ ಸಂಖ್ಯೆಗಳ ವಿವರ ಸಂಗ್ರಹಿಸುವ 33 ಪ್ರಶ್ನಾವಳಿಯನ್ನು ಬಿಡುಗಡೆ ಮಾಡಲಾಗಿದೆ.
ಎರಡು ಹಂತದಲ್ಲಿ ಜನಗಣತಿ ನಡೆಯಲಿದೆ. ಮುಂಬರುವ ಏಪ್ರಿಲ್ 1 ರಿಂದ ಆರಂಭವಾಗುವ ಮೊದಲ ಹಂತದಲ್ಲಿ ಮನೆಗಳ ಗಣತಿ ನಡೆಯಲಿದೆ. 2027ರ ಫೆ.1ರಿಂದ ನಡೆಯುವ ಎರಡನೇ ಹಂತದಲ್ಲಿ ಜನರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿ ಆಧಾರಿತ ಜನಗಣತಿ ನಡೆಯಲಿದೆ.













