

ಬೆಳ್ತಂಗಡಿ: ಬಿಗ್ಬಾಸ್ ಖ್ಯಾತಿಯ ನಟ ಉಗ್ರಂ ಮಂಜು ಇಂದು ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಯಿ ಸಂಧ್ಯಾ ಅವರ ಜೊತೆ ಜ.23 (ಇಂದು) ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಹಾಲ್ನಲ್ಲಿ ಬೆಳಗ್ಗೆ 10.15 ರ ಶುಭಮುಹೂರ್ತದಲ್ಲಿ ಮದುವೆಯಾಗಿದ್ದಾರೆ.

ಈ ಮದುವೆ ಕಾರ್ಯಕ್ರಮದಲ್ಲಿ ನಟ ಪ್ರಮೋದ್ ಶೆಟ್ಟಿ ದಂಪತಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದು, ನವ ದಂಪತಿಗಳಿಗೆ ಹಾರೈಸಿದ್ದಾರೆ.
ಉಗ್ರಂ ಮಂಜು ಮದುವೆಯಾಗುತ್ತಿರುವ ಸಂಧ್ಯಾ ಖುಷಿ ಅವರು ವೈದ್ಯಕೀಯ ಕ್ಷೇತ್ರದಲ್ಲಿದ್ದು, ಅಂಗಾಗ ಕಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ಉಗ್ರಂ ಮಂಜು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಉಗ್ರಂ ಮಂಜು ಮನೆಯಲ್ಲಿ ನಿನ್ನೆ ಅರಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರಗಳು ನಡೆದಿತ್ತು. ಧರ್ಮಸ್ಥಳದಲ್ಲಿ (ಜ.23) ಇಂದು ಈ ಜೋಡಿ ಸರಳವಾಗಿ ಮದುವೆಯಾಗಿದ್ದಾರೆ.
ಇದಾದ ನಂತರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ ಎಂದು ತಿಳಿದು ಬಂದಿದೆ.













