

ಪುತ್ತೂರು: ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸರಾವ್ ಪುತ್ರ ಕೃಷ್ಣ ಜೆ ರಾವ್ ವಂಚನೆ ಪ್ರಕರಣ ಇದೀಗ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣ ಸಿಗುತ್ತಿದೆ. ಸಂತ್ರಸ್ತೆಯನ್ನು ಮತ್ತೊಮ್ಮೆ ಸಂಧಾನಕ್ಕೆ ಕರೆದ ಕೃಷ್ಣ ಜೆ. ರಾವ್ ಕುಟುಂಬಸ್ಥರು ಮದುವೆಯಾಗಲು ಹಲವು ಷರತ್ತುಗಳನ್ನು ನೀಡಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಮಗುವಿನ ನಾಮಕರಣ ಶಾಸ್ತ್ರ ಕಲ್ಲಡ್ಕದಲ್ಲಿ ಅದ್ಧೂರಿಯಾಗಿ ನಡೆಸುವ ಎಚ್ಚರಿಕೆಯ ಬೆನ್ನಲ್ಲೇ ಇದೀಗ ಮದುವೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಮದುವೆಯಾಗಲು ಸಂತ್ರಸ್ತೆ ಕುಟುಂಬಸ್ಥರು ಕೆಲವು ಷರತ್ತುಗಳನ್ನು ಪಾಲಿಸುವುದು ಕಡ್ಡಾಯ ಎಂದು ಕೃಷ್ಣ ಕುಟುಂಬದವರು ಹೇಳಿಕೆ ನೀಡಿದ್ದಾರೆ. ಈ ಷರತ್ತುಗಳು ಏನೆಂದರೆ,
ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಕುಳಿತುಕೊಳ್ಳಬಾರದು, ಕುಟುಂಬದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡಬಾರದು, ಕಲ್ಲಡ್ಕದಲ್ಲಿ ಆಯೋಜನೆ ಮಾಡಿರುವ ಮಗುವಿನ ನಾಮಕರಣ ಕಾರ್ಯಕ್ರಮ ಕೈ ಬಿಡಬೇಕು, ಸಂಧಾನಕ್ಕೆ ಸಂತ್ರಸ್ತ ಯುವತಿ ಮತ್ತು ಆಕೆಯ ತಾಯಿ ಮಾತ್ರ ಬರಬೇಕು ಎಂದು ಸೂಚನೆ ನೀಡಲಾಗಿದೆ.
ಅದರಂತೆ ಮೇಲಿನ ಎಲ್ಲಾ ಷರತ್ತುಗಳಿಗೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಷರತ್ತುಗಳನ್ನು ಪಾಲಿಸಿ ಜನವರಿ 31 ರ ಒಳಗೆ ಕಾನೂನು ಪ್ರಕಾರವೇ ಮದುವೆ ಮಾಡಿಕೊಡಬೇಕು ಎಂದು ಸಂತ್ರಸ್ತೆ ಪರ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಆಗ್ರಹ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಸದಸ್ಯೆ ಪ್ರತಿಭಾ ಕುಳಾಯಿ, ಸಂಧಾನ ಮಾತುಕತೆಯನ್ನು ಇವರು ಪೊಲೀಸ್ ಠಾಣೆ ಅಥವಾ ಎಸ್ಪಿ ಕಚೇರಿಗಳಲ್ಲೇ ಮಾಡಬೇಕು. ಅಲ್ಲದೇ ಜನವರಿ 31ರ ಒಳಗಾಗಿ ಮದುವೆ ಕಾರ್ಯ ಪೂರ್ಣ ಮಾಡಬೇಕು. ಇದೇ ಕೊನೆಯ ಸಂಧಾನ. ಇದಾದ ನಂತರ ಯಾವುದೇ ಮಾತುಕತೆಗೆ ನಾವು ಸಿದ್ಧರಿಲ್ಲ. ಜನವರಿ 31 ರಂದು ಇವರ ಮದುವೆ ನಡೆಯಲಿಲ್ಲ ಎಂದರೆ ಫೆ.7 ರಂದು ಕಲ್ಲಡ್ಕದಲ್ಲಿ ಯುವತಿ ಕುಟುಂಬದವರ ಜೊತೆ ಸೇರಿ ಹೋರಾಟ ಆರಂಭ ಮಾಡುತ್ತೇವೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಊರಿನಲ್ಲಿಯೇ ಹೋರಾಟ ಮಾಡುತ್ತೇವೆ.
ಕಲ್ಲಡ್ಕದಲ್ಲಿ ಫೆ 7 ರಂದು ಮಗುವಿನ ನಾಮಕರಣದೊಂದಿಗೆ ನಮ್ಮ ಹೋರಾಟ ಆರಂಭಗೊಳ್ಳುತ್ತದೆ ಎಂದು ಕೃಷ್ಣ ಕುಟುಂಬದವರಿಗೆ ಎಚ್ಚರಿಕೆ ನೀಡಿದ್ದಾರೆ.













