

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಓದಿ 2024-25 ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸುವ ಬದಲು ವಿದ್ಯಾರ್ಥಿಗಳ ಖಾತೆಗೆ ಹಣ ಹಾಕುವಂತೆ ಶಾಲಾ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮದಡಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ತಾಲೂಕಿನ ಮೂವರು ವಿದ್ಯಾರ್ಥಿಗಳು ಹಾಗೂ ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲು ಕಳೆದ ವರ್ಷ ಸರಕಾರ ಅನುಮೋದನೆ ನೀಡಿತ್ತು.
ಈಗ ವಿದ್ಯಾರ್ಥಿಗಳಿಗೆ ನೀಡಲು ಮೀಸಲಿಡಲಾಗಿದ್ದ 3.25 ಕೋಟಿ ರೂ ಗಳನ್ನು ಒಟ್ಟು 758 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ನಂತೆ ವಿತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ (ಯೋಜನೆ) ಮಂಗಳಾ ಹೊರಡಿಸಿರುವ ಸುತ್ತೋಲೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (ಎಸ್ಎಸ್ಪಿ) ಮೂಲಕ ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣವನ್ನು ಡಿಬಿಟಿ ಮೂಲಕ ವಿತರಿಸುವಂತೆ ಸೂಚಿಸಲಾಗಿದ್ದು, ಕೊರತೆ ಅನುದಾನವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸ್ವಂತ ಮೂಲಗಳಿಂದ ಭರಿಸುವಂತೆಯೂ ನಿರ್ದೇಶಿಸಲಾಗಿದೆ.













