

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಮಕ್ಕಳ ರಕ್ಷಣೆಗಾಗಿ ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.
ಈ ವೇಳೆ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಂಬಗಳನ್ನು ಅಳವಡಿಸುವ ಕೆಲಸಗಳಿಗೆ ಮಕ್ಕಳನ್ನು ಬಳಸಬಾರದು. ಕವಾಯತು, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳ ಸುರಕ್ಷತೆ ಪರಿಶೀಲಿಸಬೇಕು. ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರುವ ವಾಹನಗಳ ಬಗ್ಗೆ ಪರಿಶೀಲಿಸಬೇಕು ಹಾಗೂ ಕಾರ್ಯಕ್ರಮ ನಡೆಯುವ ಪ್ರದೇಶಗಳಲ್ಲಿರುವ ಎಲ್ಲಾ ವಿದ್ಯುತ್ ಕಂಬಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಲಾಗಿದೆ.
ಸರಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ(ಯೋಜನೆ) ಶುಭಮಂಗಳಾ ಸುತ್ತೋಲೆ ಹೊರಡಿಸಿದ್ದಾರೆ.
ಮಕ್ಕಳ ರಕ್ಷಣಾ ನೀತಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಮಾರ್ಗಸೂಚಿಗಳನ್ವಯ ಅಗ್ನಿ ಇನ್ನಿತರೆ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ದೇಶನ ಕೊಡಲಾಗಿದೆ. ಕಾರ್ಯಕ್ರಮಗಳಲ್ಲಿ ಆಹಾರ ತಯಾರಿಸುವ ಜಾಗಗಳಿಗೆ ಮಕ್ಕಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳಗಳ ಬಗ್ಗೆ ಸ್ಥಳೀಯ ಪೊಲೀಸರು, ವೈದ್ಯಕೀಯ ವಿಭಾಗ, ಅಗ್ನಿಶಾಮಕದಳ ಹಾಗೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.













