

ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅವರ ಮೂವರು ಸಂಬಂಧಿಕರನ್ನು ಮನೆಯೊಳಗೆ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಘಟನೆ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಈ ಘಟನೆಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ್ದಾಗಿದ್ದು, ಗುಂಡು ಹಾರಿಸಿದ ವ್ಯಕ್ತಿಯನ್ನು 51 ವರ್ಷದ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಿಸಿದ ಸಮಯದಲ್ಲಿ, ಕುಮಾರ್ ಅವರ 12 ವರ್ಷದ ಮಗು ಸೇರಿದಂತೆ ಮೂವರು ಮಕ್ಕಳು ಕ್ಲೋಸೆಟ್‌ನಲ್ಲಿ ಅಡಗಿಕೊಂಡು ದುರಂತದಿಂದ ಬದುಕುಳಿದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ತಿಳಿಸಿದೆ. “ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ ದುರಂತ ಗುಂಡಿನ ದಾಳಿ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ, ಇದರಲ್ಲಿ ಬಲಿಯಾದವರಲ್ಲಿ ಭಾರತೀಯ ಪ್ರಜೆಯೂ ಸೇರಿದ್ದಾರೆ. ಆರೋಪಿ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ದುಃಖಿತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ” ಎಂದು ಅದು ಟ್ವೀಟ್ ಮಾಡಿದೆ.
ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆಯ ಬಗ್ಗೆ ಪೊಲೀಸರಿಗೆ ವರದಿಯಾಗಿದೆ. ಬ್ರೂಕ್ ಐವಿ ಕೋರ್ಟ್‌ನ 1000 ಬ್ಲಾಕ್‌ನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಮತ್ತು ಅವರು ಬಂದಾಗ, ಮಾರಣಾಂತಿಕ ಗುಂಡೇಟಿನ ಗಾಯಗಳೊಂದಿಗೆ ವಯಸ್ಕರ ನಾಲ್ಕು ಶವಗಳು ಮನೆಯೊಳಗೆ ಪತ್ತೆಯಾಗಿವೆ ಎಂದು ಫಾಕ್ಸ್ 5 ವರದಿ ಮಾಡಿದೆ.
ಪೊಲೀಸ್ ನಾಯಿ ಕುಮಾರ್ ಅವರನ್ನು ಹತ್ತಿರದ ಅರಣ್ಯದಲ್ಲಿ ಪತ್ತೆ ಹಚ್ಚಿದೆ. ಅಲ್ಲಿ ಆತನನ್ನು ಸೆರೆಹಿಡಿದು ವಶಕ್ಕೆ ಪಡೆಯಲಾಯಿತು.













