

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಸ್ವ ಬುದ್ದಿ ಶಕ್ತಿಯಿಂದ ಯೋಚನೆ, ಯೋಜನೆಯನ್ನು ಬೆಳೆಸಿಕೊಳ್ಳಬೇಕು. ಜ್ಞಾನವು ಸ್ವಂತ ಆಗಿರಬೇಕು ಹೊರತು ಕೃತಕವಾಗಿರಬಾರದು ಎಂದು ವಾಣಿ ಶಿಕ್ಷಣ ಸಂಸ್ಥೆಯ ಪೋಷಕರು ಹಾಗೂ ದಾನಿಗಳು ಅಮೆರಿಕದ ಕಾರ್ಡಿಯೋ ವಾಸ್ಕಲರ್ ಸರ್ಜನ್ ಡಾ.ರಾಮಯ್ಯ ಗೌಡ ಹೇಳಿದರು.
ಅಮೆರಿಕದಲ್ಲಿ ಸುಮಾರು 50 ವರ್ಷಗಳಿಂದ ನೆಲೆಸಿರುವ ಅವರು ವಾಣಿ ಶಿಕ್ಷಣ ಸಂಸ್ಥೆಗೆ ಭೇಟಿಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಆಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದು ವಿಪರ್ಯಾಸವಾಗಿದೆ. ಅದನ್ನು ನಮ್ಮ ಜ್ಞಾನಕ್ಕೆ ಅನುಸಾರವಾಗಿ ಮಿತವಾಗಿ ಬಳಸಬೇಕು ಎಂದರು. ಡಾ ರಾಮಯ್ಯ ಗೌಡ ಅವರ ಪತ್ನಿ ಶ್ರೀಮತಿ ಕೋನಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ಜೀವನಕ್ಕೆ ನಿಜವಾದ ಅಡಿಪಾಯ ಹಾಕುವವರು ಶಿಕ್ಷಕರು. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವುದು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಶಿಕ್ಷಣವನ್ನು ಮುಂದುವರಿಸಬೇಕು. ಇದರಿಂದ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎಂದರು.
ಡಾ ರಾಮಯ್ಯಗೌಡ ದಂಪತಿಗಳು ವಾಣಿ ಶಿಕ್ಷಣ ಸಂಸ್ಥೆಯ ಎಲ್.ಕೆ.ಜಿ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು. ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾರಾಯಣಗೌಡ ದೇವಸ್ಯ, ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಎಂಕೆ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಉಷಾ ವೆಂಕಟರಮಣ ಗೌಡ, ಜಯಾನಂದ ಗೌಡ ಪ್ರಜ್ವಲ್, ದಿನೇಶ್ ಗೌಡ ಕೊಯ್ಯರು, ಡಾ. ರಾಮಯ್ಯ ಗೌಡರ ಸಹೋದರ ಗೋಪಾಲ ಗೌಡ, ರೂಪ ದಂಪತಿಗಳು, ತಾಲೂಕು ಮಹಿಳಾ ಪ್ರತಿನಿಧಿ ಶೋಭನಾರಾಯಣಗೌಡ, ವಾಣಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ವಾಣಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಹಾಸಿನಿ ಉಪಸಿತರಿದ್ದರು.
ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಡಾ. ರಾಮಯ್ಯಗೌಡ ದಂಪತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಕಾರ್ಯಕ್ರಮ ನಿರೂಪಿಸಿದರು. ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ. ಧನ್ಯವಾದವಿತ್ತರು.













