

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯ ಅಕ್ರಮ ತಡೆಯುವ ಉದ್ದೇಶದಿಂದ ರೂಪಿಸಿದ್ದ ಹೊಸ ನಿಯಮಾವಳಿಯ ಅಡಿಯಲ್ಲಿ , ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2 ಮತ್ತು 3 ರ ಪರೀಕ್ಷಾ ಸಮಯವನ್ನು ಶಾಲಾ ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಷ್ಕರಿಸಿದೆ. ಬೆಳಿಗ್ಗೆ 11 ಗಂಟೆಗೆ ಈ ಹಿಂದೆ ಪರೀಕ್ಷೆ ಆರಂಭ ಮಾಡುವುದಾಗ ನಿರ್ಧಾರ ಮಾಡಿದ್ದ ಇಲಾಖೆ, ಇದೀಗ ವಿದ್ಯಾರ್ಥಿಗಳ ಅನುಕೂಲತೆ ಹಾಗೂ ಊಟದ ಸಮಯಕ್ಕೆ ಆಗುವ ಅಡಚಣೆಯನ್ನು ಪರಿಗಣಿಸಿ ಪರೀಕ್ಷೆಯನ್ನು ಬೆಳಿಗ್ಗೆ 10.30 ಗಂಟೆಗೆ ಆರಂಭ ಮಾಡಲು ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆಯು ಜ.27ರಿಂದ ಫೆ.2ರವರೆಗೆ ನಡೆಸಲಿರುವ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ-2ರ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಜ.27 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಪ್ರಥಮ ಭಾಷೆ ವಿಷಯಗಳಾದ ಕನ್ನಡ, ಹಿಂದಿ, ತೆಲುಗು, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಎನ್‌ಸಿಇಆರ್‌ಟಿ ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಯ ಪರೀಕ್ಷೆನಡೆಯಲಿದೆ. ಜ.28ರಂದು ಗಣಿತ ಪರೀಕ್ಷೆ ನಡೆಯಲಿದ್ದು, ಜ.29ರಂದು ದ್ವಿತೀಯ ಭಾಷೆಯ ವಿಷಯಗಳಾದ ಕನ್ನಡ, ಇಂಗ್ಲಿಷ್ ಪರೀಕ್ಷೆ ನಡೆಯಲಿದೆ. ಜ.30ರಂದು ತೃತೀಯ ಭಾಷೆ ಹಿಂದಿ, ಎನ್‌ಸಿಇಆರ್‌ಟಿ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಭಾಷೆಯ ಪರೀಕ್ಷೆಗಳು ನಡೆಯಲಿವೆ.
ಜ.31ರಂದು ವಿಜ್ಞಾನ, ಫೆ. 2ರಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿವೆ. ಈ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದಲ್ಲೇ ಸಂಬಂಧಿಸಿದ ವಿಷಯ ಶಿಕ್ಷಕರಿಂದ ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯು ಮುಖ್ಯ ಶಿಕ್ಷಕರಿಗೆ ಸೂಚಿಸಿದೆ.













