

ಹೊಸದಿಲ್ಲಿ: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಬಲಪಡಿಸುವ ಮತ್ತು ಅವರಿಗೆ ವೃತ್ತಿ ಮಾರ್ಗದರ್ಶನ ಒದಗಿಸುವ ಸಂಬಂಧ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನೀತಿ ಸುಧಾರಣೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಎಲ್ಲ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರ ಮತ್ತು ವೃತ್ತಿ ಮಾರ್ಗದರ್ಶಕರ ನೇಮಕಾತಿ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.
ರಾಜಸ್ಥಾನದ ಕೋಟಾ ಮೂಲದ ವಕೀಲ ಸುಜೀತ್ ಸ್ವಾಮಿ ಕಳೆದ ವರ್ಷದ ಜುಲೈನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರ್ಗದರ್ಶಕರ ನೇಮಕ ಕೋರಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಈಗ ‘ಸಿಬಿಎಸ್‌ಇ ಅಪ್ಲಿಯೇಷನ್ಬೈಲಾ-2018’ರ ಕೆಲ ನಿಯಮಗಳಿಗೆ ತಿದ್ದುಪಡಿ ತಂದು ಸುತ್ತೋಲೆ ಹೊರಡಿಸಿದೆ.
ಹೊಸ ನಿಬಂಧನೆಗಳ ಅನುಸಾರ, ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುವ ಶಾಲೆಗಳು ಪ್ರತಿ 500 ವಿದ್ಯಾರ್ಥಿಗಳಿಗೆ ಪೂರ್ಣಾವಧಿಯಲ್ಲಿ ಒಬ್ಬ ಸಾಮಾನ್ಯ ಸಮಾಲೋಚಕರು ಮತ್ತು ಮಾನಸಿಕ ಆರೋಗ್ಯ ಸಮಾಲೋಚಕರು (ಕ್ಷೇಮಪಾಲನ ಶಿಕ್ಷಕರು) ಹಾಗೂ ಒಬ್ಬ ವೃತ್ತಿ ಮಾರ್ಗದರ್ಶಕರನ್ನು ನೇಮಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊದಲು 9ರಿಂದ 12ನೇ ತರಗತಿವರೆಗೆ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಮಾತ್ರ ಪೂರ್ಣ ಸಮಯದ ಮಾನಸಿಕ ಸಮಾಲೋಚಕರನ್ನು ನೇಮಿಸಬೇಕಾಗಿತ್ತು. ಆದರೆ ಸಣ್ಣ ಶಾಲೆಗಳು ಅರೆಕಾಲಿಕ ಮಾದರಿಯಲ್ಲಿ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅನುಮತಿಸಲಾಗಿತ್ತು.













