

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ನೇತ್ರಾವತಿ ವಲಯ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದ.ಕ.ಜಿಲ್ಲೆಯ ಸುಮಾರು 16 ದೇವಾಲಯಗಳಲ್ಲಿ ಜ.25 ರಂದು ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪ್ರಯುಕ್ತ ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ತಾಲೂಕಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ದಿವ್ಯಸಾನಿಧ್ಯದಲ್ಲಿ 4:50 ರಿಂದ 7:30 ರವರೆಗೆ ಸಮಿತಿಯ ಕಾರ್ಯಕ್ರಮ ನಡೆಯಿತು.
ಕುತ್ಯಾರು ಕ್ಷೇತ್ರದ ಪ್ರಧಾನ ಅರ್ಚಕರಾದ ಸತೀಶ್ ಭಟ್ ಇವರು ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಸುಬ್ರಾಯ ಡೋಂಗ್ರೆ,ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಂಕರ್ ರಾವ್,ಕಾರ್ಯಕ್ರಮದ ಸಂಚಾಲಕರಾದ ಸಂತೋಷ್ ಎಸ್ ಹಾಗೂ ಮುಖ್ಯಶಿಕ್ಷಕಿ ಪ್ರೇಮಲತಾ ಗಣೇಶ್ ಇವರು ಉಪಸ್ಥಿತರಿದ್ದರು.
ಪ್ರಾತಃಕಾಲ 4:50 ಕ್ಕೆ ಶಂಖನಾದ ಮತ್ತು ರಘುನಾಥ ಶಾಂತಿ ಹಾಗೂ ಶ್ರೀಯುತ ಶಿವಣ್ಣ ನವರ ಭಜನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು 3 ಆವೃತ್ತಿಗಳ 108 ಸೂರ್ಯ ನಮಸ್ಕಾರಗಳೊಂದಿಗೆ ಸಂಪನ್ನಗೊಂಡಿತು.ವಿವರಣೆಯನ್ನು ಯೋಗ ಬಂಧುಗಳಾದ ರವಿಕಲಾ, ಗಣಪತಿ ಭಟ್, ಮಂಜಣ್ಣ ಇವರುಗಳು ನೀಡಿದರೆ, ಪ್ರಾತ್ಯಕ್ಷಿಕೆಯಲ್ಲಿ ನಾಗಶ್ರೀ, ಗೀತಾ, ಪುಷ್ಪ, ಪುನೀತ್, ಪ್ರಗತ್, ಪ್ರಶಾಂತ್ ಇವರು ಸಹಕರಿಸಿದರು.108 ಮಂತ್ರಗಳನ್ನು ಸತೀಶ್ ಇವರು ಪಠಿಸಿದರು. ರಥಸಪ್ತಮಿಯ ವಿಶೇಷತೆಯಬಗ್ಗೆ ಹಾಗೂ ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕವನ್ನು ಸಂತೋಷ್ ಎಸ್ ಇವರು ನಡೆಸಿಕೊಟ್ಟರು.
ಸೂರ್ಯೋದಯದ ಅವಧಿಯಲ್ಲಿ ಅಗ್ನಿಹೋತ್ರವನ್ನು ಕೋಮಲ ಹಾಗೂ ಪ್ರಕಾಶ್ ದಂಪತಿಗಳು ನಿರ್ವಹಿಸಿದರು. ಯೋಗ ನಮಸ್ಕಾರದ ಆರಂಭದ ಮಾನಸಿಕ ಸಿದ್ಧತೆ ಹಾಗೂ ಉಸಿರಾಟ ಕ್ರಿಯೆಗಳನ್ನು ಯೋಗಬಂಧು ರಕ್ಷಿತಾ ಹಾಗೂ ಅಮೃತಾಸನವನ್ನು ಮುಖ್ಯಶಿಕ್ಷಕಿ ಪ್ರೇಮಲತಾ ಗಣೇಶ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕರಾಗಿ ಸಂತೋಷ್ ಎಸ್ ಹಾಗೂ ಸಹ ಸಂಚಾಲಕರಾಗಿ ಧೀರಜ್, ಶಿಕ್ಷಣ ವಿಧಿಯ ಮಾರ್ಗದರ್ಶಕರಾಗಿ ಸಂತೋಷ್ ಕಾಪಿನಡ್ಕ ಹಾಗೂ ಕೋಮಲ ಜವಾಬ್ದಾರಿಯನ್ನು ನಿರ್ವಹಿಸಿದರು. ಸುರೇಶ್ ಸ್ವಾಗತಿಸಿ, ಅಶ್ವಥ್ ಕಾರ್ಯಕ್ರಮವನ್ನು ನಿರೂಪಿಸಿದರು . ಧೀರಜ್ ಇವರು ವಂದಿಸಿದರು. ಭಾಗವಹಿಸಿದ ಯೋಗಬಂಧುಗಳಲ್ಲಿ ಹಿರಿಯರು ಕಿರಿಯರು ಎನ್ನುವ ವಯಸ್ಸಿನ ಭೇದವಿಲ್ಲದೆ ಹೆಚ್ಚಿನವರು 108 ಸೂರ್ಯ ನಮಸ್ಕಾರಗಳನ್ನು ಮಾಡಿ ಧನ್ಯತಾಭಾವವನ್ನು ಅನುಭವಿಸಿದರು. ಜಿಲ್ಲಾ ಸಹ ಸಂಚಾಲಕರಾದ ಯೋಗೀಶ್ ಪುತ್ತೂರು ಇವರ ಗೌರವ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ, ಪ್ರೇಮಲತಾಗಣೇಶ್ ಇವರ ನೇತೃತ್ವದಲ್ಲಿ ಎಲ್ಲಾ ಯೋಗಬಂಧುಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.













