

ಬಳ್ಳಾರಿ: ”ಜಿ-ಸ್ಟಾಯರ್ ಲೇಔಟ್ನ ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಹತ್ತಿಸಿರುವುದು ರೀಲ್ಸ್ನಲ್ಲಿ ರೆಕಾರ್ಡ್ ಆದ ವಿಡಿಯೊವನ್ನು ಬಿಡುಗಡೆ ಮಾಡಲಿ,”ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ”ಲೇಔಟ್ ನಲ್ಲಿ ಮಾದರಿ ಹೌಸ್ ನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಆದರೆ, ಪೊಲೀಸರು ಹೇಳುವ ಪ್ರಕಾರ ಬೀಡಿ, ಸಿಗರೇಟಿನಿಂದ ಬಂದ ಬೆಂಕಿಯ ಕಿಡಿಯಿಂದ ಬೆಂಕಿ ಹತ್ತಿದೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಕೆಳ ಹಂತದ ಅಧಿಕಾರಿಗಳ ಮಾತನ್ನು ಎಸ್ಪಿ ಅವರು ಕೇಳದೆ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಬೇಕಿದೆ,”ಎಂದರು.
ಕೋರ್ಟ್ ಮೆಟ್ಟಿಲೇರಲು ಸಿದ್ಧ: ”ಬೆಂಕಿ ಹಚ್ಚಿದ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರಕಾರ ತನಿಖೆಯನ್ನು ಸಿಐಡಿಗೆ ನೀಡಿದೆ. ಹೀಗಾಗಿ, ತನಿಖೆಗೆ ಸಹಕಾರಿಯಾಗಿ ಘಟನೆ ವೇಳೆ ಪತ್ತೆಯಾದ ವಿಡಿಯೊಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಕೃತ್ಯದಲ್ಲಿ ಪಾಲ್ಗೊಂಡವರ ಹೆಸರು, ವಿಳಾಸ ಪತ್ತೆ ಹಚ್ಚುವ ಕಾರ್ಯವನ್ನು ನಾವೇ ಮಾಡುತ್ತಿದ್ದೇವೆ. ಈಗಾಗಲೇ 43 ಯುವಕರನ್ನು ಗುರುತಿಸಲಾಗಿದೆ. ಪ್ರಕರಣದಲ್ಲಿ ನ್ಯಾಯ ಸಿಗುವುದಕ್ಕಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದೇವೆ,” ಎಂದು ಹೇಳಿದರು.













