

ಬೆಳ್ತಂಗಡಿ: ಗಣರಾಜ್ಯೋತ್ಸವದ ಪ್ರಯುಕ್ತ ಕೊಡ ಮಾಡುವ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ದ.ಕ. ಜಿಲ್ಲಾ ಡಿಸಿಆರ್‌ಇಯ ವರಿಷ್ಠಾಧಿಕಾರಿ ಸಿ.ಎ.ಸೈಮನ್ ಆಯ್ಕೆಯಾಗಿದ್ದಾರೆ. ಕಡಬ ಮೂಲದವರಾಗಿದ್ದು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧೀಕ್ಷಕರಾಗಿರುವ ಸಿ.ಎ.ಸೈಮನ್ ಅವರ ಕಾರ್ಯ ದಕ್ಷತೆಯನ್ನು ಪರಿಗಣಿಸಿ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದ ಎಸ್‌ಪಿಯಾಗಿಯೂ ಸೈಮನ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸೈಮನ್‌ರವರ ಪರಿಚಯ: ಮೂಲತ: ಕಡಬ ಹಳಸ್ಟೇಷನ್ ನಿವಾಸಿಯಾಗಿರುವ ಸೈಮನ್‌ರವರು ಪ್ರಸ್ತುತ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ನಿವಾಸಿಯಾಗಿದ್ದಾರೆ. ಉಪ್ಪಿನಂಗಡಿಯಲ್ಲಿ ತನ್ನ ವ್ಯಾಸಂಗವನ್ನು ಆರಂಭಿಸಿದ್ದ ಸೈಮನ್‌ರವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರೈಸಿ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದ್ದರು.
೨೦೦೨ರಲ್ಲಿ ರಾಜ್ಯ ಸಿಐಡಿ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಸೇವೆ ಆರಂಭಿಸಿ ಬಳಿಕ ಪದೋನ್ನತಿಗೊಂಡು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಡಿವೈಎಸ್ಪಿಯಾಗಿ ಭಡ್ತಿ ಹೊಂದಿ ೨೦೧೧ರಲ್ಲಿ ಮುಖ್ಯಮಂತ್ರಿಯವರ ಪದಕಕ್ಕೆ ಭಾಜನರಾಗಿದ್ದರು. ಅವರು ೨೦೨೦ರಲ್ಲಿ ಎಸ್ಪಿಯಾಗಿ ಪದೋನ್ನತಿಗೊಂಡಿದ್ದರು. ಎಸಿಬಿಯಲ್ಲಿ ಪಶ್ಚಿಮ ವಲಯದ ಎಸ್ಪಿಯಾಗಿ ೨೦೨೧ ಆಗಸ್ಟ್ ೨ರಂದು ಅಧಿಕಾರ ವಹಿಸಿಕೊಂಡಿದ್ದರು.
ಹೈಕೋರ್ಟ್ ಆದೇಶದಂತೆ ಸರಕಾರ ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಮರು ಅಧಿಕಾರ ಸ್ಥಾಪಿಸಿದ್ದ ಬಳಿಕ ಸೈಮನ್‌ರವರು ಲೋಕಾಯುಕ್ತ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರಲ್ಲದೆ ದ.ಕ. ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡ ಮಂಗಳೂರು ಲೋಕಾಯುಕ್ತ ವಿಭಾಗದ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈಮನ್ ಅವರು ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ರಾಜ್ಯ ಸರಕಾರ ರಚಿಸಿದ್ದ ಎಸ್‌ಐಟಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದ ಸೈಮನ್ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರ ಈ ಎಲ್ಲಾ ಕಾರ್ಯ ದಕ್ಷತೆಯನ್ನು ಪರಿಗಣಿಸಿ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೈಮನ್ ಅವರ ತಂದೆ ಸಿ.ಪಿ.ಅಬ್ರಹಾಂ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.













