

ಶಿವಮೊಗ್ಗ, ಜನವರಿ 27: ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಾತ್ರೆ ತಿಂದು ಅಸ್ವಸ್ಥರಾಗಿರುವಂತಹ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಮಾತ್ರೆ ನೀಡಲಾಗಿದ್ದು, 59 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಅನಿಮಿಯಾ ತಡೆಗಟ್ಟಲು ವಾರಕ್ಕೊಮ್ಮೆ ಖನಿಜಾಶಂದ ಮಾತ್ರೆ ನೀಡಲಾಗುತ್ತದೆ. ಇಂದು ಮಧ್ಯಾಹ್ನ ಶಾಲೆಯಲ್ಲಿ ಮಾತ್ರೆ ನೀಡಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯಲ್ಲಿ ಸುಮಾರು 59 ವಿದ್ಯಾರ್ಥಿಗಳಿಗೆ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥ ವಿದ್ಯಾರ್ಥಿಗಳಿಗೆ ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ವಿದ್ಯಾರ್ಥಿಗಳಿಗೆ ಜೀವಾಪಾಯವಿಲ್ಲ ಎಂದು ಟಿಹೆಚ್ಓ ಹಾಗೂ ಬಿಇಓ ನಾಗೆಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.













