2
ಮಂಗಳೂರು ನಗರದ ನಂತೂರು ಬಿಕರ್ನಕಟ್ಟೆ ಸಮೀಪ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಮೃತ ಸವಾರನನ್ನು ಉಳಾಯಿಬೆಟ್ಟು ನಿವಾಸಿ, ಬಸ್ ಚಾಲಕ ದಯಾನಂದ್ (35) ಎಂದು ಗುರುತಿಸಲಾಗಿದೆ.
ದಯಾನಂದ್ ಕೆಲಸ ಮುಗಿಸಿ ನಂತೂರಿನಿಂದ ವಾಮಂಜೂರು ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿರುವಾಗ ಬಿಕರ್ನಕಟ್ಟೆ ಜಂಕ್ಷನ್ ನಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಲಾರಿಯು ಸ್ಕೂಟರ್‌ನ್ನು ಸ್ವಲ್ಪ ದೂರಕ್ಕೆ ಎಳೆದುಕೊಂಡು ಹೋಗಿದೆ. ಸವಾರನ ತಲೆ ಮೇಲೆಯೇ ಲಾರಿ ಹರಿದ ಪರಿಣಾಮ ಗುರುತು ಪತ್ತೆ ಆಗದಂತೆ ರೀತಿಯಲ್ಲಿ ನಜ್ಜುಗುಜ್ಜಾಗಿತ್ತು. ಹಾಗಾಗಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಸಾರ್ವಜನಿಕರು ಕೈಕಂಬ ಬಳಿ ತಡೆ ಹಿಡಿದಿದ್ದಾರೆ. ಲಾರಿಯನ್ನು ಚಾಲಕ ಸಹಿತ ವಶಕ್ಕೆ ಪಡೆಯಲಾಗಿದ್ದು, ಘಟನಾ ಸ್ಥಳಕ್ಕೆ ನಗರ ಪೂರ್ವ ಸಂಚಾರ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
