Home » ಚಿಕನ್ ಫ್ರೈ ವಿಷಯಕ್ಕೆ ಶುರುವಾದ ದಂಪತಿಗಳ ಜಗಳ ಕೊಲೆಯಲ್ಲಿ ಅಂತ್ಯ!!

ಚಿಕನ್ ಫ್ರೈ ವಿಷಯಕ್ಕೆ ಶುರುವಾದ ದಂಪತಿಗಳ ಜಗಳ ಕೊಲೆಯಲ್ಲಿ ಅಂತ್ಯ!!

0 comments

ಪೀಣ್ಯ(ದಾಸರಹಳ್ಳಿ):ಗಂಡ-ಹೆಂಡತಿಯರ ನಡುವೆ ಜಗಳ ಮನಸ್ತಾಪ ಸರ್ವೇ ಸಾಮಾನ್ಯ. ಆದರೆ ಇಲ್ಲೊದು ಕಡೆ ದಂಪತಿಗಳ ನಡುವೆ ಚಿಕನ್‌ ಫ್ರೈ ರುಚಿಯಾಗಿಲ್ಲವೆಂದು ಶುರುವಾದ ಜಗಳ ಕೊಲೆಯವರೆಗೂ ಮುಂದುವರಿದ ಘಟನೆ ಹೆಸರಘಟ್ಟ ರಸ್ತೆಯ ತರಬನಹಳ್ಳಿಯಲ್ಲಿ ನಡೆದಿದೆ.

ಪತ್ನಿಯಾದ ಶಿರೀನ್‌ಬಾನು (25) ಎಂಬುವವರನ್ನು ಪತಿ ಮುಬಾರಕ್‌ (32) ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. ಬಳಿಕ ಆರೋಪಿಯಾದ ಪತಿಯೇ ಪೊಲೀಸರಿಗೆ ಶರಣಾಗಿದ್ದಾನೆ.

ಶಿರೀನ್‌ ಬಾನು ಗೃಹಿಣಿಯಾಗಿದ್ದು, ಪತಿ ಮುಬಾರಕ್‌ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಹಾಸಿಗೆ ವ್ಯಾಪಾರ ನಡೆಸುತಿದ್ದ. ದಾವಣಗೆರೆ ಮೂಲದ ಶಿರೀನ್‌ಬಾನು ಮತ್ತು ಮುಬಾರಕ್‌ ಐದು ವರ್ಷಗಳ ಹಿಂದೆ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.

ಇಪ್ಪತ್ತು ದಿನಗಳ ಹಿಂದೆ ಶಿರೀನ್‌ಬಾನು ತಂಗಿ ತರಬನಹಳ್ಳಿಯ ಮನೆಗೆ ಆಗಮಿಸಿದ್ದಳು. ಈ ವೇಳೆ ಮಾಡಿದ್ದ ಚಿಕನ್‌ ಫ್ರೈ ರುಚಿಯಾಗಿರಲಿಲ್ಲ ಎಂದು ಮುಬಾರಕ್‌ ನಾದಿನಿಯ ಎದುರೇ ಹೆಂಡತಿಗೆ ಬೈದು,ಅಡುಗೆ ಮಾಡಲು ಬರುವುದಿಲ್ಲವೇ ಎಂದು ಹೀಯಾಳಿಸಿದ್ದ. ಇದರಿಂದ ಶಿರೀನ್‌ ಬಾನು ಕೋಪಗೊಂಡಿದ್ದಳು.

ಆಕೆಯ ತಂಗಿ ಊರಿಗೆ ಮರಳಿದ ಬಳಿಕ,ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಮುಬಾರಕ್‌ ದೊಣ್ಣೆಯಿಂದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಜೋರಾಗಿ ಬಿದ್ದ ಪೆಟ್ಟಿನಿಂದ ಶಿರೀನ್‌ ಮೃತಪಟ್ಟಿದ್ದಾಳೆ. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಮುಬಾರಕ್‌ ಹೆಂಡತಿ ಶವವನ್ನು ಹಾಸಿಗೆಯಲ್ಲಿ ಸುತ್ತಿ, ಚಿಕ್ಕಬಾಣಾವಾರ ಕೆರೆಗೆ ಎಸೆದಿದ್ದಾನೆ.

ಶಿರೀನ್‌ಬಾನು 18 ದಿನಗಳಿಂದ ಫೋನ್‌ಗೆ ಸಿಗದಿರುವ ಬಗ್ಗೆ ಆಕೆಯ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಮುಬಾರಕ್‌ಗೆ ಕರೆ ಮಾಡಿದಾಗ ಆತ ಸುಳ್ಳು ನೆಪ ಹೇಳುತ್ತಿದ್ದ.

ಕೊನೆಗೆ ಕುಟುಂಬಸ್ಥರ ಒತ್ತಡ ತಾಳಲಾರದೆ, ಆರೋಪಿ ಮುಬಾರಕ್‌ ವಕೀಲರೊಂದಿಗೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆಗೆ ಹೋಗಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿ ಆತನೇ ಶರಣಾಗಿದ್ದಾನೆ.

You may also like

Leave a Comment