ಒಂದು ಕೈಯನ್ನು ತಲೆಗೆ ಒರಗಿಸಿಕೊಂಡು ಇನ್ನೊಂದು ಕೈಯನ್ನು ಹೊಟ್ಟೆಯ ಮೇಲೆ ಹಾಕಿ ಹಾಗೇ ಆರಾಮಾಗಿ ನಿದ್ರಿಸುವ ವ್ಯಕ್ತಿಯನ್ನು ಕಂಡರೆ ಮೊದಲು ಹೇಳುವ ಮಾತೆಂದರೆ, ಓಹೋ… ರಂಗನಾಥಸ್ವಾಮಿ ಹಾಗೇ ಮಲಗಿದ್ದಾನೆ ನೋಡಿ ಅಂತಾ. ಆದರೆ, ಅದೇ ಭಂಗಿಯಲ್ಲಿ ಒಂದು ಪ್ರಾಣಿ ವಿಶ್ರಾಂತಿ ಪಡೆಯುವುದನ್ನು ಎಂದಾದರೂ ನೋಡಿದ್ದೀರಾ? ಸಾಮಾನ್ಯವಾಗಿ ಯಾರು ನೋಡಿರಲು ಸಾಧ್ಯವಿಲ್ಲ. ಆದರೆ ಈ ಚಿತ್ರ ನೋಡಿದಾಗ ಒಂದು ಕ್ಷಣ ನಿಮ್ಮ ಹುಬ್ಬೇರುವುದಂತೂ ಸತ್ಯ.
ಹೌದು, ಊಸರವಳ್ಳಿಯೊಂದು ತಿಮ್ಮಪ್ಪನ ಭಂಗಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರನ್ನು ಅಚ್ಚರಿಗೆ ದೂಡಿದೆ. ಈ ಫೋಟೋವನ್ನು ಇಂಡೋನೇಷ್ಯಾದ ಪಶ್ಚಿಮ ಸುಮಾತ್ರದ ಪಡಾಂಗ್‌ನಲ್ಲಿ ಸೆರೆಹಿಡಿಯಲಾಗಿದೆ. ತನ್ನ ಮಾಲೀಕನ ಗಾರ್ಡನ್‌ನಲ್ಲಿ ಊಸರವಳ್ಳಿಯು ಹಸಿರು ಹಾಸಿಗೆಯ ಮೇಲೆ ಮಲಗಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಎಂಜಾಯ್ ಮಾಡುತ್ತಿದೆ.
ಫೋಟೋದಲ್ಲಿ ಸರೀಸೃಪವು ತನ್ನ ತಿಳಿ ಬಣ್ಣದ ಕೆಳಹೊಟ್ಟೆಯನ್ನು ತೋರಿಸುತ್ತಿದೆ. ಏಕೆಂದರೆ ಅದು ತನ್ನ ಮಾಲೀಕ ಯಾನ್ ಹಿದಾಯತ್ ಅವರ ಉದ್ಯಾನದ ಹುಲ್ಲಿನ ನಡುವೆ ಒಂದು ಪುಟ್ಟ ನಿದ್ರೆಯನ್ನು ತೆಗೆದುಕೊಳ್ಳುತ್ತಿದೆ.
ಇನ್ನು ಈ ಊಸರವಳ್ಳಿಯನ್ನು ಎರಡು ವರ್ಷಗಳ ಹಿಂದೆ ಹಿದಾಯತ್ ರಕ್ಷಣೆ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಊಸರವಳ್ಳಿಯನ್ನು ಹಿದಾಯತ್ ರಕ್ಷಿಸಿ, ತಾವೇ ಸಲಹುತ್ತಿದ್ದಾರೆ. ಇಂದು ಹಿದಾಯತ್ ಗಾರ್ಡನ್‌ನಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿರುವ ಊಸರವಳ್ಳಿ ಪ್ರತಿ ದಿನ ಎರಡು ಗಂಟೆ ಸೂರ್ಯನ ಕಿರಣಗಳಿಗೆ ತನ್ನ ಮೈಯೊಡ್ಡಿ ಆರಾಮಾಗಿ ನಿದ್ರಿಸುತ್ತದೆ ಎಂದು ಹಿದಾಯತ ಹೇಳಿದ್ದಾರೆ.
ಯಾವಾಗಲೂ ಒಳ್ಳೆಯ ಊಟ, ಯಾವುದೇ ಭಯವಿಲ್ಲದೆ ನಿರ್ಭಯವಾಗಿ ಓಡಾಡಿಕೊಂಡು ಇರಲು ಸುಂದರವಾದ ಗಾರ್ಡನ್, ನೋಡಿಕೊಳ್ಳಲು ಓರ್ವ ಯಜಮಾನನನ್ನು ಹೊಂದಿರುವ ಈ ಊಸರವಳ್ಳಿ ಎಂತಹ ಲಕ್ಷುರಿ ಲೈಫ್ ನಡೆಸುತ್ತಿದೆ. ಇಂಥ ಪುಣ್ಯ ಯಾರಿಗೆ ಉಂಟು ಹೇಳಿ? ಇಂತಹ ಜೀವನ ನಡೆಸುತ್ತಿರುವ ಊಸರವಳ್ಳಿಯೇ ತುಂಬಾ ಲಕ್ಕಿ ಕಣ್ರೀ..!!
