ಕಡಬ: ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನವನ್ನು ಕಡಬದ ಮರ್ದಾಳ ಬಳಿ ಮಾರ್ಗ ಮಧ್ಯೆ ತಡೆದು ನಿಲ್ಲಿಸಿ ಕೆಲವು ಅಪರಿಚಿತ ವ್ಯಕ್ತಿಗಳು ದೌರ್ಜನ್ಯ ನಡೆಸಿರುವರೆಂದು ಆರೋಪಿಸಿರುವ ಗುತ್ತಿಗಾರು ನಿವಾಸಿ ದೈವ ನರ್ತಕ ಧರ್ಮಪಾಲ ಅಡ್ಢಣಪಾರೆ ಅವರು ಆ ರೀತಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಸೆ.14 ರಂದು ನಮ್ಮ ಮನೆಯ ದೈವಗಳ ಕಾರ್ಯಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿಗಳನ್ನು ಪೂರೈಸುವ ಸಲುವಾಗಿ ನಾನು ನನ್ನ ಕುಟುಂಬ ಸಮೇತ ಧರ್ಮಸ್ಥಳ ಹಾಗೂ ಸೌತೆಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿ ಬಳಿಕ ಕಡಬದ ಮರ್ದಾಳ ಮೂಲಕ ಕುಕ್ಕೆ ಸುಬ್ರಹ್ಮಣ್ಯದತ್ತ ನಮ್ಮ ಪರಿಚಿತರ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಾಡು ರಸ್ತೆಯ ಮಧ್ಯೆ ನಮ್ಮ ಜೀಪಿಗೆ ಕಾರನ್ನು ಅಡ್ಡವಿರಿಸಿ ನಮ್ಮನ್ನು ಬೇರೆ ವಾಹನದಲ್ಲಿ ಪ್ರಯಾಣಿಸುವಂತೆ ದಬಾಯಿಸಿನ ದೌರ್ಜನ್ಯವೆಸಗಿದ್ದಾರೆ. ನಮ್ಮನ್ನು ನಿಂದಿಸಿ ದರ್ಪ ಮೆರೆದು ಆ ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ನಮಗೆ ಮಾನಸಿಕ ಹಿಂಸೆ ನೀಡಿದ್ದಾರೆ.
ಈ ಕುರಿತು ನಾವು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಮುಂದೆ ಆ ರೀತಿ ಮಾಡದಂತೆ ಎಚ್ಚರಿಸಿ ಬಿಟ್ಟಿರುತ್ತಾರೆ. ನಾವು ಖಾಸಗಿ ವಾಹನದಲ್ಲಿ ಸಂಚರಿಸುತ್ತಿದ್ದೇವೆಂದು ಆರೋಪಿಸಿ ನಮ್ಮ ಜೀಪನ್ನು ತಡೆದು ನಿಲ್ಲಿಸಿ ನಮಗೆ ಕಿರುಕುಳ ನೀಡಿರುವುದೆಂದು ಬಳಿಕ ನಮಗೆ ತಿಳಿದು ಬಂತು. ಇದೇ ರೀತಿ ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯಲ್ಲಿ ಯಾತ್ರಿಕರು ಪ್ರಯಾಣಿಸುವ ವಾಹನಗಳನ್ನು ಅಕ್ರಮವಾಗಿ ತಡೆದು ನಿಲ್ಲಿಸುವ ಮೂಲಕ ಕೆಲವು ವ್ಯಕ್ತಿಗಳು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಪದೇ ಪದೇ ಕೇಳಿಬರುತ್ತಿದ್ದು, ನೈತಿಕ ಪೊಲೀಸ್ ಗಿರಿ ಮಾಡುವ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಪೊಲೀಸ್ ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಎ., ಜಯಶ್ರೀ ಎ., ಉಮೇಶ್ ಎಸ್. ವಿಟ್ಲ ಉಪಸ್ಥಿತರಿದ್ದರು.
