Chitradurga : ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಐವರು ಮಹಿಳೆಯರು ಸಜೀವ ದಹನವಾಗಿದ್ದಾರೆ. ದುರಂತದ ವಿಚಾರವೆಂದರೆ ಮದುವೆ ಫಿಕ್ಸ್ ಆಗಿದ್ದ ಯುವತಿ ಒಬ್ಬಳು ಸಾವಿಗೀಡಾಗಿದ್ದಾಳೆ. ಮಗಳ ಮದುವೆಯ ಆಸೆ ಕಂಡಿದ್ದ ತಂದೆ, ಇದೀಗ ಸುಟ್ಟು ಕರಕಲಾಗಿದ್ದ ಮಗಳ ದೇಹವನ್ನು ಗುರುತಿಸುತ್ತಿರುವ ಮನ ಮಿಡಿಯುವ ವಿಚಾರ ಬೆಳಕಿಗೆ ಬಂದಿದೆ.
ಚನ್ನರಾಯಪಟ್ಟಣ ಮೂಲದ ನವ್ಯಾ ಎಂಬ ಯುವತಿಯ ಮದುವೆ ಫಿಕ್ಸ್ ಆಗಿದ್ದು ಆಕೆಯು ಆ ಬಸ್ನಲ್ಲಿ ಪ್ರಯಾಣಿಸುತ್ತಿದ್ದಳು. ಇದೀಗ ಮಗಳ ಸಾವಿನ ಸುದ್ದಿ ತಿಳಿದ ತಂದೆ ಮಂಜಪ್ಪ ಸುಟ್ಟ ಕರಕಲಾದ ಬಸ್ನಲ್ಲಿ ಮಗಳನ್ನ ಹುಡುಕುತ್ತಿದ್ದು, ಅಪ್ಪನ ಮಾತು ಕರಳು ಹಿಂಡುತ್ತದೆ.
ನವ್ಯಾ, ಮಾನಸ, ಮಿಲನಾ ಎಂಬ ಮೂವರು ಯುವತಿಯರು ಇದೇ ಬಸ್ನಲ್ಲಿ ಪ್ರಯಾಣ ಮಾಡ್ತಿದ್ರು. ಅಪಘಾತದ ಬಳಿಕ ಕಿಟಕಿ ಗಾಜಿನ ಮೂಲಕ ಮಿಲನಾ ಹೊರಬಂದಿದ್ದಾರೆ. ಆದ್ರೆ ಜೊತೆಯಲ್ಲೇ ಇದ್ದ ನವ್ಯಾ, ಮಾನಸ ನಾಪತ್ತೆಯಾಗಿದ್ದಾರೆ. ಚನ್ನರಾಯಪಟ್ಟಣದಿಂದ ಮಗಳನ್ನು ಹುಡುಕಿಕೊಂಡು ಬಂದ ತಂದೆ ಸುಟ್ಟ ಬೂದಿ ಕಂಡು ಕಣ್ಣೀರು ಹಾಕ್ತಿದ್ದಾರೆ. ಏಪ್ರಿಲ್ 28ಕ್ಕೆ ಅವರ ಮದುವೆ ನಿಶ್ಚಯವಾಗಿತ್ತು. ಇತ್ತೀಚೆಗೆ ಆಕೆಯ ಎಂಗೇಜ್‌ಮೆಂಟ್ ಕೂಡ ನಡೆದಿತ್ತು ಎಂದು ಆಕೆಯ ತಂದೆ ಮಂಜಪ್ಪ ಹೇಳಿದ್ದಾರೆ.
ಅಪಘಾತದ ವಿಚಾರ ಗೊತ್ತಾಗ್ತಿದ್ದಂತೆ ಓಡೋಡಿ ಬಂದ ನವ್ಯಾ ತಂದೆ ಮಂಜಪ್ಪ, ದುರಂತದ ಜಾಗದಲ್ಲಿ ಮಗಳು ಕಾಣ್ತಿಲ್ಲ, ಆಸ್ಪತ್ರೆಯಲ್ಲೂ ನನ್ನ ಮಗಳೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನವ್ಯಾ, ಮಾನಸ, ಮಿಲನ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಏಪ್ರಿಲ್ ನಲ್ಲಿ ನನ್ನ ಮಗಳ ಮದುವೆ ನಿಶ್ಚಯ ಆಗಿತ್ತು. ಈಗ ನನ್ನ ಮಗಳೇ ಕಾಣ್ತಿಲ್ಲ ಎಂದು ತಂದೆ ಕಣ್ಣೀರು ಹಾಕಿದ್ದಾರೆ.
