ಮರ್ಸಡೀಸ್ ಬೆಂಜ್ ದೇಶ-ವಿದೇಶಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇದೀಗ 3ನೇ ಆವೃತ್ತಿಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ನೂತನ ಕಾರನ್ನು ಅನಾವರಣಗೊಳಿಸಿದೆ. ಈ ಕಾರು ಪ್ರತಿ ಚಾರ್ಜ್ ಗೆ ಬರೋಬ್ಬರಿ 1 ಸಾವಿರ ಕಿ.ಮೀ ಗೂ ಹೆಚ್ಚು ಮೈಲೇಜ್ ನೀಡಲಿದೆ. ಇನ್ನೂ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಈ ನೂತನ ಕಾರಿನ ಅಭಿವೃದ್ಧಿಯಲ್ಲಿ ಭಾರತದಲ್ಲಿರುವ ಮರ್ಸಡೀಸ್ ಬೆಂಜ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ(MBRDI) ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಇನ್ನೂ ಈ ಕಾರನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು ಒಂದು ತಿಂಗಳ ಕಾಲ ಬಳಸಬಹುದಾಗಿದೆ.
ಕಾರಿನ ರೂಫ್ ಟಾಪ್‌ನಲ್ಲಿ ಸೋಲಾರ್ ಪ್ಯಾನೆಲ್ ಅಳಡಿಸಿದ್ದು, ಈ ಸೋಲಾರ್ ಪವರ್‌ನಿಂದ ಕಾರಿನ ಲೈಟ್ಸ್, ಇನ್ಫೋಟೈನ್ಮೆಂಟ್ ಸಿಸ್ಟಮ್ ಚಾಲಿತವಾಗುತ್ತದೆ. ಇದರಿಂದಾಗಿ ಇನ್ನು 25 ಕಿಲೋಮೀಟರ್ ಹೆಚ್ಚುವರಿ ಮೈಲೇಜ್ ಸಿಗಲಿದೆ. ಈ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಐಷಾರಾಮಿ ಸೌಲಭ್ಯಗಳು ಇವೆ. ಹಾಗೇ ಗ್ರಾಹಕರ ಕಣ್ಮನ ಸೆಳೆಯುವ, ಅತ್ಯಂತ ಆಕರ್ಷಣೀಯ ಡಿಸೈನ್ ಅನ್ನು ಈ ಕಾರು ಒಳಗೊಂಡಿದೆ.
ಮರ್ಸಿಡೀಸ್ ಬೆಂಜ್ 3ನೇ ಆವೃತ್ತಿಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ರಸ್ತೆ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಅದರಲ್ಲಿ ವಿಶೇಷವಾಗಿ ಮರ್ಸಿಡೀಸ್ ಬೆಂಜ್ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಲಾಯಿತು.
ಗರಿಷ್ಠ ಸುರಕ್ಷತೆಯ ಕಾರು, ಕಾರಿನಲ್ಲಿ ಬಳಸಿರುವ ಮೆಟಲ್, ಒಂದು ವೇಳೆ ಕಾರು ಅಪಘಾತವಾದರೆ ಅದರ ತೀವ್ರತೆ ಕಾರಿನ ಒಳಗಿರುವ ಪ್ರಯಾಣಿಕರಿಗೆ ತಟ್ಟದಂತೆ ಮಾಡಲು ಇರುವ ವ್ಯವಸ್ಥೆ, 10 ಏರ್‌ಬ್ಯಾಗ್ ಮೂಲಕ ಗರಿಷ್ಠ ಸುರಕ್ಷತೆ, ಎಮರ್ಜೆನ್ಸಿ ಕಾಲ್ ಒಳಗೊಂಡಂತೆ ಹಲವು ಸುರಕ್ಷತಾ ವಿಧಾನಗಳನ್ನು ಮರ್ಸಿಡೀಸ್ ಬೆಂಜ್ ಪಾಲಿಸುತ್ತಿದೆ.
ರಸ್ತೆ ಸುರಕ್ಷತೆ ಕುರಿತು ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ವಾಹನ ಚಾಲನೆಯ ಕುರಿತು ಅರಿವು ಮೂಡಿಸಲಾಗಿದೆ. ಇದೀಗ ಮೂರನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದೇವೆ. ಹಾಗೇ ದೇಶದ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರವನ್ನು ಆಯೋಜಿಸುತ್ತಿದ್ದೇವೆ ಎಂದು MBRDI ನಿರ್ದೇಶಕ ಹಾಗೂ ಸಿಇಒ ಮನು ಸಾಲೆ ಅವರು ಹೇಳಿದರು.
