ಸ್ಯಾಂಡಲ್ ವುಡ್ ಹೆಸರಾಂತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ತೆರೆಯ ಮೇಲೆ ಅಬ್ಬರಿಸುತ್ತಿರುವ ಬೆನ್ನಲ್ಲೇ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.

ಶಿವರಾಜ್ ಕುಮಾರ್ ನಟನೆಯ ‘ವೇದ’ ಚಿತ್ರ ಸದ್ಯ ಬಹುತೇಕ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ಹೊಸಚಿತ್ರದ ಬಗ್ಗೆ ಮಾಹಿತಿ ಬಂದಿದೆ. ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡುತ್ತಿರುವ ಈ ನೂತನ ಚಿತ್ರದ ನಾಯಕರಾಗಿ ಶಿವಣ್ಣ ಅಭಿನಯಿಸಲಿದ್ದಾರೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು. ಈ ಸಂಸ್ಥೆಯಿಂದ ಹಿಂದೆ ‘ಶಿವಾರ್ಜುನ’ ಚಿತ್ರ ನಿರ್ಮಾಣವಾಗಿತ್ತು
ಸಿನಿಮಾ ಕುರಿತು ಮಾತನಾಡಿರುವ ತೇಜಸ್ವಿ ಅವರು ‘ಶಿವಣ್ಣ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜ್ ಕುಮಾರ್ ಅವರು ಈತನಕ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟವಾಗುವಂತೆ ಕಥೆ ಬರೆದುಕೊಳ್ಳಲಾಗಿದೆ’ ಎಂದಿದ್ದಾರೆ.
ಈ ಮೊದಲು ನಿರ್ದೇಶಕ ತೇಜಸ್ವಿ ಅವರು ಶಿವಣ್ಣನ ಹುಟ್ಟು ಹಬ್ಬದ ದಿನದಂದು ಶುಭಕೋರಿ ಸಿನಿಮಾ ಬಗ್ಗೆ ಸುಳಿವು ನೀಡಿದ್ದರು. ವೇದ ಬಿಡುಗಡೆ ವೇಳೆಯಲ್ಲಿ ಆ ಚಿತ್ರಕ್ಕೂ ಶುಭ ಕೋರಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಸಿನಿಮಾ ಮಾಡುವ ಕುರಿತು ಮಾತನಾಡಿದ್ದಾರೆ. ಚಿತ್ರೋದ್ಯಮದಲ್ಲಿ ಇದೊಂದು ಹೊಸ ಬಗೆಯ ಸಿನಿಮಾವಾಗಲಿದೆ ಎಂದು ಅವರು ಭರವಸೆಯನ್ನೂ ನೀಡಿದ್ದಾರೆ.
ನಿರ್ದೇಶಕ ತೇಜಸ್ವಿ ಕೆ ನಾಗ್ ಅವರು ಈ ಹಿಂದೆ ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದೆ ಇಲ್ಲಿತನಕ’ ಚಿತ್ರಕ್ಕೆ ನಿರ್ದೇಶಕರಾಗಿದ್ದರು. ಇದಾದ ಬಳಿಕ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ನಿರ್ದೇಶಕರ ಎರಡನೇ ಸಿನಿಮಾ ಇದಾಗಿದ್ದು, ಕಿರುತೆರೆ ಲೋಕದಲ್ಲಿ ತೇಜಸ್ವಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಇವರು ಭರವಸೆಯನ್ನೂ ಮೂಡಿಸಿದ್ದರು.
