Home » ನಟಿ ಬಿದಿಶಾ ಡೇ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ನಟಿ ಬಿದಿಶಾ ಡೇ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

by Praveen Chennavara
0 comments

ಕೊಲ್ಕತ್ತಾ: ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಆಘಾತದಿಂದ ಮನೋರಂಜನಾ ಉದ್ಯಮ ಚೇತರಿಸಿಕೊಳ್ಳುವ ಮುನ್ನವೇ ಬುಧವಾರ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.

ಮಾಡೆಲ್ ಹಾಗೂ ನಟಿ ಬಿದಿಶಾ ಡೇ ಮಜುಂದಾರ್ ಅವರ ಮೃತದೇಹ ಡಂಡಂನಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿದೆ.

21 ವರ್ಷದ ನಟಿ ಬಾಡಿಗೆ ಮನೆಯಲ್ಲಿ ಪೋಷಕರ ಜತೆ ವಾಸವಿದ್ದರು.ಬುಧವಾರ ಸಂಜೆ ಈ ನಟಿಯ ಮೃತದೇಹ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವುದು ತಿಳಿದುಬಂದಿಲ್ಲ. ಆರಂಭಿಕ ತನಿಖೆ ನಡೆಯುತ್ತಿದ್ದು, ಪೊಲೀಸರು ಬಿದಿಷಾ ಅವರ ಅತ್ಮೀಯ ಸ್ನೇಹಿತರಿಂದ ಮತ್ತು ಕುಟುಂಬದವರಿಂದ ಮಾಹಿತಿ ಪಡೆಯುತ್ತಿದ್ದಾರೆ. ತಕ್ಷಣಕ್ಕೆ ಇದು ಆತ್ಮಹತ್ಯೆ ಎಂದು ಅಂದಾಜಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಯನ್ನು ಪೊಲೀಸರು ನಿರೀಕ್ಷಿಸುತ್ತಿದ್ದಾರೆ.

ಮಾಡೆಲಿಂಗ್‍ನಲ್ಲಿ ತೀರಾ ಪರಿಚಿತ ಮುಖವಾಗಿರುವ ವಿದಿಶಾ ಅವರನ್ನು ಅನಿರ್ಬದ್ ಚಟ್ಟೋಪಾಧ್ಯಾಯ ಅವರು 2021ರಲ್ಲಿ ‘ಬಾರ್- ದ ಕ್ಲೋನ್’ ಎಂಬ ಕಿರು ಚಿತ್ರದ ಮೂಲಕ ಚಿತ್ರಜಗತ್ತಿಗೆ ಪರಿಚಯಿಸಿದ್ದರು. ಜನಪ್ರಿಯ ನಟ ದೇವರಾಜ್ ಮುಖರ್ಜಿ ಈ ಚಿತ್ರದಲ್ಲಿ ನಾಯಕ ನಟನಾಗಿದ್ದು, ವಿದಿಶಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.

ಟಿವಿ ನಟಿ ಪಲ್ಲವಿ ಡೇ ಅವರ ಮೃತದೇಹ ಮೇ 15ರಂದು ಕೊಲ್ಕತ್ತಾದ ಗಾರ್ಫಾದಲ್ಲಿರುವ ಅವರ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಎರಡು ಪ್ರಕರಣಗಳು ಖಿನ್ನತೆ ಸಮಸ್ಯೆಯನ್ನು ಮತ್ತೆ ಮುನ್ನಲೆಗೆ ತಂದಿದೆ.

You may also like

Leave a Comment