Pavitra Lokesh: ಕೆಲ ತಿಂಗಳ ಹಿಂದೆ ನಟಿ ಪವಿತ್ರಾ ಲೋಕೇಶ್(pavitra lokesh) ಮತ್ತು ತೆಲುಗು ನಟ ನರೇಶ್(Naresh) ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡಿದ್ದವು. ಇಬ್ಬರು ಮದುವೆ ಆಗಿದ್ದಾರೆ, ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದಿದ್ದವು. ಅಲ್ಲದೆ, ಸಾಕಷ್ಟು ಕಾಂಟ್ರವರ್ಸಿ ಕೂಡ ಆಗಿತ್ತು. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇವರದ್ದೇ ಹೆಚ್ಚು ಸುದ್ದಿಗಳಿರುತ್ತಿದ್ದವು. ಆದರೀಗ ನರೇಶ್ ಅವರು ಜಾಲತಾಣಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವಿಬ್ರೂ ಏನಾದ್ರೂ ಮಾಡ್ಕೋತೀವಿ, ನಿಮಗ್ಯಾಕೆ ಎಂದಿದ್ದಾರೆ? ಅಷ್ಟೇ ಅಲ್ಲದೆ ಪೋಲೀಸರಿಗೆ ದೂರನ್ನೂ ಕೂಡ ನೀಡಿದ್ದಾರೆ.
ಹೌದು, ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಆರೋಪ, ಪ್ರತ್ಯಾರೋಪ, ಗಾಸಿಪ್ಗಳು ಇರುವುದು ಸಾಮಾನ್ಯ. ಆದರೆ ಇವೆಲ್ಲವೂ ಒಂದು ಹಂತ ಮೀರಿ ಹೋದರೆ ಅದನ್ನು ಸಹಿಸಿಕೊಳ್ಳುವುದು ಕಷ್ಟ. ಅಂತೆಯೇ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಸಂಬಂಧದ ವಿಷಯದಲ್ಲೂ ಇದೇ ಆಗಿದೆ. ಇದಾಗಲೇ ಇವರ ವಿಷಯದಲ್ಲಿ ಕೆಲ ತಿಂಗಳುಗಳಿಂದ ಭಾರಿ ಸುದ್ದಿ ಹರಿದಾಡುತ್ತಿದೆ.
ಇವರು ಹೋದಲ್ಲಿ, ಬಂದಲ್ಲಿ ಕ್ಯಾಮೆರಾ ಕಣ್ಣುಗಳು ಹಿಂದೆಯೇ ಹೋಗುತ್ತಿರುತ್ತವೆ. ಇಲ್ಲೀವರೆಗೂ ಇವೆಲ್ಲವನ್ನು ಸಹಿಸಿದ್ದ ಚಿತ್ರ ರಂಗದ ಈ ಹೊಸ ಜೋಡಿಗಳು ಇದೀಗ ಮೌನ ಮುರಿದಿದ್ದು, ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿಂದೆಯೂ ಒಮ್ಮೆ ನರೇಶ್ ಎಲ್ಲರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ನರೇಶ್ ಅವರ ಮಲ ತಂದೆ ನಟ ಕೃಷ್ಣ ಅವರು ನಿಧನರಾದ ಸಂದರ್ಭದಲ್ಲಿ ನಡೆದ ಸಂಗತಿ ಇದಕ್ಕೆ ಕಾರಣವಾಗಿತ್ತು. ಅವರ ಅಂತಿಮ ದರ್ಶನಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ಹೋಗಿದ್ದಾಗ ಇವರಿಬ್ಬರೂ ಕಣ್ ಸನ್ನೆಯಲ್ಲೇ ಮಾತನಾಡುತ್ತಿದ್ದುದಾಗಿ ಫೋಟೋ ಹಾಕಿ ಟ್ರೋಲ್ (Troll) ಮಾಡಲಾಗಿತ್ತು. ಇದರ ವಿರುದ್ಧ ಸಿಡಿದೆದ್ದಿದ್ದ ನರೇಶ್. ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಮಾಡಲಾಗುತ್ತಿದೆ ಎಂದು ತೆಲಂಗಾಣ (Telangana) ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಇದು ಇಲ್ಲಿಗೆ ಸುಮ್ಮನಾಗಲಿಲ್ಲ. ಜನರು ಒಂದು ಸಲ ಸಿಕ್ಕರೆ ಬಿಡುತ್ತಾರೆಯೆ? ಈಗಲೂ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್, ಥಹರೇವಾರಿ ಕಮೆಂಟ್ಗಳು, ಫೋಟೋಗಳು ಬರುತ್ತಲೇ ಇವೆ. ಟ್ರೋಲ್ಗಳು ಹೆಚ್ಚುತ್ತಲೇ ಇರುವ ಕಾರಣ ನರೇಶ್, ಇನ್ನೊಮ್ಮೆ ಈಗ ದೂರು ದಾಖಲು ಮಾಡಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಬರೆಯುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಬರೆದಿದ್ದಾರೆ.
ಯಾವ್ಯಾವುದೋ ಹೆಸರುಗಳನ್ನು ಇಟ್ಟುಕೊಂಡ ಚಾನೆಲ್ಗಳು ಸಾಮಾಜಿಕ ಜಾಲತಾಣವನ್ನು ವೇದಿಕೆ ಮಾಡಿಕೊಂಡು, ತಮಗೆ ಮಾನಹಾನಿ ಮಾಡುವಂತಹ ವಿಷಯ, ಗಾಸಿಪ್ಗಳನ್ನು ಬರೆಯುತ್ತಿದ್ದಾರೆ. ನಮ್ಮ ಮನೆಯಲ್ಲಿ ನಡೆಯುವ ಖಾಸಗಿ ವಿಷಯಗಳನ್ನು ಮನಸೋ ಇಚ್ಛೆ ಬರೆಯುತ್ತಿದ್ದಾರೆ. ನಮ್ಮ ಮೇಲಿನ ದ್ವೇಷದಿಂದ ಅವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ನರೇಶ್ ದೂರಿನಲ್ಲಿ (Complaint) ತಿಳಿಸಿರುವುದಾಗಿ ಹೇಳಲಾಗಿದೆ.
ಅಲ್ಲದೆ ಈ ಹಿಂದೆ ಹೊಸ ವರ್ಷ ಸಮೀಪಿಸುತ್ತಿದ್ದಂತೆ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದರು. ಮೇಲಾಗಿ ನರೇಶ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪವಿತ್ರಾಗೆ ಲಿಪ್ ಕಿಸ್ ನೀಡಿದ ವಿಡಿಯೋ ಪೋಸ್ಟ್ ಮಾಡಿದ್ದು, ಅವರ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ನರೇಶ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಹೊಸ ವರ್ಷದ ಮುನ್ನಾದಿನದಂದು ಇಬ್ಬರೂ ಕೇಕ್ ಕತ್ತರಿಸಿ ನಂತರ ಪರಸ್ಪರ ಕೇಕ್ ತಿನ್ನಿಸಿದರು.
ನಂತರ ಇಬ್ಬರು ಲಿಪ್ ಲಾಕ್(Liplock) ಮಾಡಿದ್ದರು. ಈಗ ಈ ವಿಡಿಯೋ ಟ್ರೆಂಡಿಂಗ್ ಕೂಡ ಆಗಿತ್ತು. ಇದಕ್ಕೂ ಮುನ್ನ ನರೇಶ್ ಪವಿತ್ರಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ಮದುವೆಯಾಗಿಲ್ಲ ಎಂದಿದ್ದರು.
