Sampathige Savaal: ಇದು ಸಂಪತ್ತಿಗೆ ಸವಾಲು ಚಿತ್ರದ ಸಂದರ್ಭದಲ್ಲಿ ನಡೆದ ಒಂದು ರಸವತ್ತಾದ ಪ್ರಕರಣ. ಸಂಪತ್ತಿಗೆ ಸವಾಲ್ ಅಂದರೆ, ‘ ಯಾರೇ ಕೂಗಾಡಲಿ ಯಾರೇ ಹೋರಾಡಲಿ,…. ನಿನಗೆ ಸಾಟಿ ಇಲ್ಲ…’ ಹಾಡು ಅಂತಾನೇ ಹೇಳಬಹುದು. ಅಷ್ಟರ ಮಟ್ಟಿಗೆ ರಾಜ್ ಕುಮಾರ್ ಅವರು ನಟಿಸಿರುವ ಆ ಚಿತ್ರ ಮತ್ತು ಅದಕ್ಕೆ ಪೂರಕವಾಗಿ ಇಂತಹ ಹಾಡು ಫೇಮಸ್ಸು. ಅವತ್ತು ಸಂಪತ್ತಿಗೆ ಸವಾಲ್(Sampathige Savaal) ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಂದಿನ ಶೂಟಿಂಗ್ ಮುಖ್ಯ ಪಾತ್ರದಲ್ಲಿ ರಾಜಕುಮಾರ್ ಜೊತೆ ಒಂದು ಎಮ್ಮೆ ಕೂಡ ನಟಿಸುತ್ತಿತ್ತು.
ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ್ನ ನೆಮ್ಮದಿಗೆ ಭಂಗವಿಲ್ಲ… ‘ಸಂಪತ್ತಿಗೆ ಸವಾಲ್’ ಚಿತ್ರದ ಈ ಹಾಡು ಕನ್ನಡ ಚಿತ್ರಗೀತೆಗಳ ಮಟ್ಟಿಗೆ ಎಂದೂ ಮರೆಯದ ಹಾಡುಗಳಲ್ಲಿ ಒಂದು. ಈ ಹಾಡೇ ಡಾಕ್ಟರ್ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಗಾಯನದ ಹಾಡು. ಅಂದು ಈ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಿದ್ದು ಡಾ. ರಾಜ್ ಅವರ ಹುಟ್ಟೂರು ಗಾಜನೂರಿನಲ್ಲಿ ನಡೆದಿತ್ತು.
ಶೂಟಿಂಗ್ ಆರಂಭ ಆಯ್ತು. ಶೂಟಿಂಗ್ ಆರಂಭವಾದಾಗ ಡಾ. ರಾಜ ಕುಮಾರ್, ಎಮ್ಮೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ. ಆದರೆ ಅವರಿಗೆ ಹಿಂದಿನ ದಿನದಂತೆ ಕಂಫರ್ಟ್ ಎನಿಸಿಲ್ಲ. ಆಗ ಅವರು ಸಹಾಯಕ ನಿರ್ದೇಶಕ ಮಲ್ಲೇಶ್ ರನ್ನು ಕರೆದು,’ ಏ ಮಲ್ಲೇಶಾ, ಏನ್ಲಾ ಇದು, ಇದ್ರ ಕೂದ್ಲು ಚುಚ್ಚುತ್ತಿದೆ, ನಿನ್ನೆ ಈ ರೀತಿ ಆಗಿರ್ಲಿಲ್ವೋ’ ಎಂದಿದ್ದಾರೆ.
ಶೂಟಿಂಗ್ ಸಂದರ್ಭ ಎಮ್ಮೆ ಮಾರಾಟ:
ಮಲ್ಲೇಶ್ ಅವರನ್ನು ಹತ್ತಿರ ಕರೆದು, ಇದು ನಿನ್ನೆ ಕರೆ ತಂದಿದ್ದ ಎಮ್ಮೆಯೇನಾ? ನನಗೆ ಇದರ ಕೂದಲು ಚುಚ್ಚುತ್ತಿದೆ, ನಿನ್ನೆ ಈ ರೀತಿ ಆಗಿರಲಿಲ್ಲ ಎಂದಿದ್ದಾರೆ ರಾಜ್. ಆಗ ಸಹಾಯಕ ನಿರ್ದೇಶಕ ಮಲ್ಲೇಶ್ ರವರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂದು ಅಲ್ಲಿ ಅಂತದ್ದು ಏನಾಗಿತ್ತು ಗೊತ್ತೇ ?
ಹಿಂದಿನ ದಿನ ಅಲ್ಲಿ ಎಮ್ಮೆಯ ಜೊತೆ ಶೂಟಿಂಗ್ ಸರಿಯಾಗಿ ನಡೆದಿತ್ತು. ಮರುದಿನ ಒಂದು ದಿನ ಶೂಟಿಂಗ್ ಬಾಕಿ ಇತ್ತು. ಮರುದಿನ ಕೂಡ ಎಮ್ಮೆಯನ್ನು ಸರಿಯಾದ ಸಮಯಕ್ಕೆ ಶೂಟಿಂಗ್ ಜಾಗಕ್ಕೆ ಹೊಡೆದುಕೊಂಡು ಬರಲು ಹೆಮ್ಮೆಯ ಮಾಲೀಕ ಒಪ್ಪಿಕೊಂಡಿದ್ದ. ಅದರಂತೆ ಎಮ್ಮೆಯ ಮಾಲೀಕನಿಗೆ ಬೇಕಾದ ಹಣ ಪಾವತಿ ಆಗಿತ್ತು. ಆದರೆ ಅಷ್ಟರಲ್ಲಿ ಎಡವಟ್ಟು ನಡೆದು ಹೋಗಿತ್ತು. ಮೊದಲ ದಿನ ಶೂಟಿಂಗ್ ನಡೆದ ನಂತರ ರಾತ್ರಿ ಎಮ್ಮೆಗೆ ಏಕಾಏಕಿ ದೊಡ್ಡಮಟ್ಟದ ಬೇಡಿಕೆ ಸೃಷ್ಟಿಯಾಗಿತ್ತು. ಎಮ್ಮೆಯ ಹೆಮ್ಮೆಯ ಮಾಲೀಕ ಹಣದ ಆಸೆಗಾಗಿ ಎಮ್ಮೆಯನ್ನು ಮಾರಿಬಿಟ್ಟಿದ್ದ. ಹೊಸ ಮಾಲಿಕ ಎಮ್ಮೆ ಹೊಡೆದುಕೊಂಡು ಬೇರೆ ಊರಿಗೆ ಹೊರಟು ಹೋಗಿದ್ದ. ಎಮ್ಮೆ ಇಲ್ಲದೆ ಶೂಟಿಂಗ್ ನಿಂತೇ ಬಿಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಹಾಗಾಗಿ, ಮರುದಿನ ಬೆಳಿಗ್ಗೆ ತರಾತುರಿಯಲ್ಲಿ ಸಹಾಯಕ ನಿರ್ದೇಶಕರು ತಮ್ಮ ತಂಡದೊಂದಿಗೆ ಹೊಸ ಎಮ್ಮೆ ಹುಡುಕಲು ಶುರು ಮಾಡಿದ್ದರು. ಹಳ್ಳಿಯಲ್ಲಿ ಇನ್ನೊಂದು ಮನೆಯಲ್ಲಿ ಎಮ್ಮೆ ಹುಡುಕಿ ತಂದು ಶೂಟ್ ಶುರುವಿಟ್ಟಿದ್ದರು. ಅದು ಯಾರ ಗಮನಕ್ಕೂ ಬಾರದೆ ಇದ್ದರೂ ಎಮ್ಮೆ ಮೇಲೆ ಕುಳಿತುಕೊಳ್ಳುವ ರಾಜಕುಮಾರ ಅವರಿಗೆ ಎಮ್ಮೆಯ ಕೂದಲು ಚುಚ್ಚಿ, ಅದರ ಬಗ್ಗೆ ಪ್ರಶ್ನಿಸಿದ್ದರು. ಆಗ ಮಲ್ಲೇಶ್ ಅವರು, ‘ಅಣ್ಣಾವ್ರೇ, ದಯವಿಟ್ಟು ನಿರ್ದೇಶಕರಿಗೆ ಹೇಳಬೇಡಿ. ಆಮೇಲೆ ನಮಗೆ ಸರ್ಯಾಗಿ ಇಕ್ತಾರೆ ಎಂದು ಹೇಳಿ ಸವಿಸ್ತಾರವಾಗಿ ಎಮ್ಮೆಯ ಮಾರಾಟದ ಕಥೆಯನ್ನು ಹೇಳಿದ್ದರು. ಮಲ್ಲೇಶ್ ಅವರ ಮನವಿಗೆ ಸ್ಪಂದಿಸಿದ ಅಣ್ಣಾವ್ರು ಈ ವಿಚಾರದ ಬಗ್ಗೆ ಯಾರಲ್ಲಿಯೂ ಹೇಳದೆ, ಅಂಡಿಗೆ ಎಮ್ಮೆಯ ರೋಮ ಚುಚ್ಚುತ್ತಿದ್ದರು ತುಟಿಪಿಟಕ್ ಎನ್ನದೆ ಆಗುತ್ತಿದ್ದ ಕಷ್ಟವನ್ನು ಸಹಿಸಿಕೊಂಡು ಶೂಟಿಂಗ್ ಮುಗಿಸಿದ್ದರು.
ಇವತ್ತಿಗೂ ಯಾವತ್ತಾದರೂ ಈ ಸಿನಿಮಾ ಟಿವಿಯಲ್ಲಿ ಬಂದರೆ ಅಥವಾ ನಿಮಗೆ ಸಿಕ್ಕಿದರೆ ಸೂಕ್ಷ್ಮವಾಗಿ ಗಮನಿಸಿ. ಯಾರೇ ಕೂಗಾಡಲಿ.. ಹಾಡಿನಲ್ಲಿ ನೀವು ಎರಡು ಎಮ್ಮೆಗಳನ್ನು ಗುರುತಿಸಬಹುದು ಎಂದು ಬಿ ಮಲ್ಲೇಶ್, ಅಂದು ನಡೆದ ಘಟನೆಯ ಬಗ್ಗೆ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೇ ಮಲ್ಲೇಶ್ ಅವರು ಮುಂದೆ ಸ್ವತಂತ್ರ ನಿರ್ದೇಶಕರಾದರು. ಅವರು, ಜಗ್ಗೇಶ್ ಅಭಿನಯದ ರೂಪಾಯಿ ರಾಜ ಒಲವು ಮೂಡಿದಾಗ, ಕಲ್ಯಾಣ ಮಸ್ತು, ಗಿರಿಬಾಲೆ, ನೀನಂದ್ರೆ ಇಷ್ಟ ಸೇರಿ ಇನ್ನೂ ಅನೇಕ ಸಿನಿಮಾಗಳನ್ನು ನಿರ್ಮಿಸಿದರು.
ಸಂಪತ್ತಿಗೆ ಸವಾಲ್ ಚಿತ್ರದ ಬಗ್ಗೆ:
ಎವಿ ಶೇಷಗಿರಿ ರಾವ್ ನಿರ್ದೇಶನದ ಸಿನಿಮಾ
‘ಸಂಪತ್ತಿಗೆ ಸವಾಲ್’ ಚಿತ್ರವನ್ನು ಪದ್ಮಶ್ರೀ ಎಂಟರ್ಪ್ರೈಸಸ್ ಬ್ಯಾನರ್. ಸುಮಾರು 50 ವರ್ಷಗಳ ಹಿಂದೆ ತೆರೆಕಂಡ, ಅಂದರೆ 1974 ರಲ್ಲಿ ತೆರೆ ಕಂಡಿದ್ದ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಅಣ್ಣಾವ್ರಿಗೆ ಮಂಜುಳಾ ನಾಯಕಿಯಾಗಿ ನಟಿಸಿದ್ದರು. ವಿಲನ್ ವಜ್ರಮುನಿ, ಹಾಸ್ಯ ನಟ ಬಾಲಕೃಷ್ಣ, ಎಂವಿ ರಾಜಮ್ಮ, ರಾಜಾ ಶಂಕರ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದರು. ಚಿ. ಉದಯಶಂಕರ್ ಅವರು ಸಾಹಿತ್ಯ ಈ ಚಿತ್ರಕ್ಕಿತ್ತು. ಹಾಡಿನಿಂದಲೇ ಈ ಚಿತ್ರ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದರಲ್ಲಿ ಆ ಎಮ್ಮೆಗಳ ಪಾಲೂ ಇತ್ತು ಎನ್ನಬಹುದು.
