Home » ಆದಷ್ಟು ಕ್ಷಿಪ್ರ, ಎತ್ತರ ಹಾಗೂ ಬಲಿಷ್ಠ ಎಂಬ ಧ್ಯೇಯ ವಾಕ್ಯದೊಂದಿಗೆ ಶುರುವಾದ ಟೋಕಿಯೋ ಒಲಿಂಪಿಕ್ಸ್ ಗೆ ಇಂದು ವಿದ್ಯುಕ್ತ ತೆರೆ | ಹೆಮ್ಮೆಪಡಲು ಭಾರತಕ್ಕೆ ಕಾರಣಗಳಿವೆ !!

ಆದಷ್ಟು ಕ್ಷಿಪ್ರ, ಎತ್ತರ ಹಾಗೂ ಬಲಿಷ್ಠ ಎಂಬ ಧ್ಯೇಯ ವಾಕ್ಯದೊಂದಿಗೆ ಶುರುವಾದ ಟೋಕಿಯೋ ಒಲಿಂಪಿಕ್ಸ್ ಗೆ ಇಂದು ವಿದ್ಯುಕ್ತ ತೆರೆ | ಹೆಮ್ಮೆಪಡಲು ಭಾರತಕ್ಕೆ ಕಾರಣಗಳಿವೆ !!

by ಹೊಸಕನ್ನಡ
0 comments

ಕ್ಷಿಪ್ರವಾಗಿ, ಎತ್ತರಕ್ಕೆ ಹಾಗೂ ಬಲಿಷ್ಠ ಎಂಬುದು ಒಲಿಂಪಿಕ್ ಧ್ಯೇಯ ವಾಕ್ಯ. ಒಲಂಪಿಕ್ ನ 5 ಚಕ್ರಗಳು 5 ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತದೆ. ಕೂಬರ್ತಿಯ ಪ್ರಕಾರ “ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ, ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಮುಖ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದೇ ಹೊರತು ವಿಜಯ ಸಾಧಿಸುವುದೇ ಗುರಿ ಅಲ್ಲ.”

ಇಂತಹ ಒಂದು ಅದ್ಭುತ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿದ್ದ ವಿಶ್ವದ ಅತಿದೊಡ್ಡ ಕ್ರೀಡಾ ಕಾರ್ಯಕ್ರಮ ಒಲಿಂಪಿಕ್-2020ಕ್ಕೆ ಇಂದು ಸಾಯಂಕಾಲ ತೆರೆ ಬೀಳಲಿದೆ. ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಸಂಜೆ 4.30ಕ್ಕೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ.

ಭಾರತದ ಪರವಾಗಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಭಜರಂಗ್ ಪುನಿಯಾ ರಾಷ್ಟ್ರ ಧ್ವಜವನ್ನು ಹೊತ್ತು ಸಾಗಲಿದ್ದಾರೆ. ಕಳೆದ 17 ದಿನಗಳಲ್ಲಿ ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣ ವೇದಿಕೆ ಹಲವು ಕ್ರೀಡಾ ಮೆರುಗು, ಪದಕಗಳನ್ನು ಗೆದ್ದು ಹೆಮ್ಮೆಯಿಂದ ಬೀಗಿದ ಕ್ರೀಡಾಪಟುಗಳ ಆನಂದಭಾಷ್ಪ, ಪದಕದಿಂದ ವಂಚಿತರಾದ ಕ್ರೀಡಾಪಟುಗಳ ಕಣ್ಣೀರಿಗೆ ವೇದಿಕೆಯಾಗಿದೆ.

ಇಂದು ಸಾಯಂಕಾಲ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಕೋವಿಡ್-19 ನಿರ್ಬಂಧಗಳೊಂದಿಗೆ ಹಲವು ಪ್ರದರ್ಶನಗಳು ನೆರವೇರಲಿವೆ. ಅದ್ಧೂರಿ ಸಮಾರೋಪ ಸಮಾರಂಭವು ಸೋನಿ ಟೆನ್, ಸೋನಿ ಲಿವ್‌ ನಲ್ಲಿ ಪ್ರಸಾರವಾಗಲಿದೆ.

ಈ ಬಾರಿಯ ಒಲಿಂಪಿಕ್ ನಲ್ಲಿ ಹಲವು ತೃತೀಯ ಲಿಂಗಿಗಳು ಪ್ರವೇಶ ಪಡೆದಿದ್ದರು ಎನ್ನುವುದು ಮತ್ತೊಂದು ವಿಶೇಷ. ಕೋವಿಡ್-19 ಕಾರಣದಿಂದ ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ ಗೇಮ್ ನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಆತಂಕ, ನಿರ್ಬಂಧಗಳೊಂದಿಗೆ ಈ ಬಾರಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ 17 ದಿನಗಳ ಕ್ರೀಡಾ ಚಟುವಟಿಕೆ ಮುಕ್ತಾಯವಾಗುತ್ತಿದೆ.

ಕೊನೆಯ ದಿನವಾದ ಇಂದು ಪುರುಷರ ಮ್ಯಾರಥಾನ್ ಫೈನಲ್, ಮಹಿಳಾ ರಿದಮಿಕ್ ಜಿಮ್ನಾಸ್ಟಿಕ್ಸ್ ಮತ್ತು ಮಹಿಳಾ ಬಾಸ್ಕೆಟ್‌ಬಾಲ್ ಪದಕ ಸುತ್ತಿನ ಪಂದ್ಯ ನಡೆಯುತ್ತಿದೆ. ಹ್ಯಾಂಡ್‌ಬಾಲ್, ಬಾಕ್ಸಿಂಗ್, ಟ್ರ್ಯಾಕ್ ಸೈಕ್ಲಿಂಗ್, ವಾಟರ್ ಪೋಲೋ ಮತ್ತು ವಾಲಿಬಾಲ್‌ಗಾಗಿ ಪದಕ ಪಂದ್ಯಗಳನ್ನು ಆಡಲಾಗುತ್ತದೆ.

ಇಂದಿನ ಮುಕ್ತಾಯ ಸಮಾರಂಭದಲ್ಲಿ ಒಲಿಂಪಿಕ್ಸ್‌ ಧ್ವಜವನ್ನು 2024ರ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಫ್ರಾನ್ಸ್‌ಗೆ ಹಸ್ತಾಂತರಿಸಲಾಗುತ್ತದೆ. ಇದೇ ತಿಂಗಳು 24 ರಿಂದ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳಲಿದ್ದು, ಆ ಕ್ರೀಡಾಕೂಟಕ್ಕೂ ಟೋಕಿಯೋ ಆತಿಥ್ಯ ನೀಡಲಿದೆ. ಸೆಪ್ಟೆಂಬರ್ 5ಕ್ಕೆ ಪ್ಯಾರಾಲಿಂಪಿಕ್ಸ್‌ ಮುಕ್ತಾಯಗೊಳ್ಳಲಿದೆ.

ಭಾರತ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಏಳು ಪದಕಗಳನ್ನು ಪಡೆದು, ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಭಾರತವು ೧೯೦೦ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿತು. ಭಾರತದಿಂದ ಸ್ಪರ್ಧಿಸಿದ ಏಕೈಕ ಕ್ರೀಡಾಪಟು ನಾರ್ಮನ್ ಪ್ರಿಟ್ಚರ್ಡ್. ಅವರು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಭಾರತ ಒಲಂಪಿಕ್ಸ್ ನಲ್ಲಿ ಒಟ್ಟು 35 ಪದಕಗಳನ್ನು ಗೆದ್ದಿದೆ.

You may also like

Leave a Comment