Kitchen Tips : ದೋಸೆ ಮತ್ತು ಇಡ್ಲಿ ಹಿಟ್ಟುಗಳು ಚೆನ್ನಾಗಿ ಹುದುಗಿದರೆ ಬೇಯಿಸಿದಾಗ ಮಲ್ಲಿಗೆಯ ರೀತಿ ಹಾಗೂ ಗರಿಗರಿಯಾಗಿ ಬರುತ್ತವೆ. ಆದರೆ ಹಿಟ್ಟು ಹುದುಗದಿದ್ದರೆ ಯಾವ ಕಾರಣಕ್ಕೂ ಇವು ಚೆನ್ನಾಗಿ ಬರುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಂತೂ ಎಷ್ಟು ಪ್ರಯತ್ನಿಸಿದರು ಕೂಡ ಹಿಟ್ಟು ಹುದುಗುವುದೇ ಇಲ್ಲ. ಇದು ಮನೆಯ ಯಜಮಾನಿಯರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಆದರೆ ಇನ್ನೂ ಈ ಚಿಂತೆ ಬಿಡಿ. ಯಾಕೆಂದರೆ, ಕೇವಲ ಗಂಟೆಯಲ್ಲಿ ಹಿಟ್ಟನ್ನು ಹುದುಗಿಸುವ ಸೂಪರ್ ಸೀಕ್ರೆಟನ್ನು ನಾವು ನಿಮಗೆ ಹೇಳುತ್ತೇವೆ.
ಮೊದಲಿಗೆ ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಗೆ ಸುರಿದು ಉಪ್ಪು ಸೇರಿಸಿ. ಈಗ ಪ್ರೆಶರ್ ಕುಕ್ಕರ್ ಅನ್ನು ಸ್ಟೌವ್ ಮೇಲೆ ಇರಿಸಿ. ಅದನ್ನು ಸ್ವಲ್ಪ ಬಿಸಿ ಮಾಡಿ (ಒಳಗೆ ಬಿಸಿಯಾಗುತ್ತದೆ). ನಂತರ ಬಿಸಿ ಕುಕ್ಕರ್ ಒಳಗೆ ಹಿಟ್ಟನ್ನು ಹೊಂದಿರುವ ಪಾತ್ರೆ ಇರಿಸಿ. ಮುಚ್ಚಳವನ್ನು ಮುಚ್ಚಿ. ಶಿಳ್ಳೆ ಹೊಡೆಸಿ. ಈಗ ಕುಕ್ಕರ್ ಅನ್ನು ಮತ್ತೆ ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಇರಿಸಿ ನಂತರ ಒಲೆ ಆಫ್ ಮಾಡಿ. ಕುಕ್ಕರ್ ಒಳಗಿನ ಶಾಖದಿಂದಾಗಿ ಹಿಟ್ಟು ಒಂದು ಗಂಟೆಯೊಳಗೆ ಸುಲಭವಾಗಿ ಮೇಲೇರುತ್ತದೆ.
ಇಷ್ಟು ಮಾತ್ರವಲ್ಲದೆ ಹಿಟ್ಟಿಗೆ ಕಲ್ಲು ಉಪ್ಪು ಸೇರಿಸಿ. ಅದಕ್ಕೆ ಅರ್ಧ ಟೀ ಚಮಚ ಮೊಸರು, ಕಾಲು ಟೀ ಚಮಚ ಸಕ್ಕರೆ ಮತ್ತು ಕಾಲು ಟೀ ಚಮಚ ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ ಬಿಗಿಯಾಗಿ ಮುಚ್ಚಿಡಿ. ನೀವು ಈ ಹಿಟ್ಟಿನ ಪಾತ್ರೆಯನ್ನು ಬಿಸಿ ಒಲೆಯ ಬಳಿ ಅಥವಾ ಯಾವುದೇ ಬೆಚ್ಚಗಿನ ಸ್ಥಳದಲ್ಲಿ ಇಟ್ಟರೆ ಅದು ಸುಮಾರು ಒಂದು ಗಂಟೆಯಲ್ಲಿ ಹುದುಗುತ್ತದೆ. ಜೊತೆಗೆ ಪ್ಲಾಸ್ಟಿಕ್ ಅಥವಾ ಸಿಲ್ವರ್ ಪಾತ್ರೆಗಳಲ್ಲಿ ಇಡುವ ಬದಲು, ಸ್ಟೀಲ್ ಹಾಗೂ ಮಣ್ಣಿನ ಪಾತ್ರಗಳಲ್ಲಿ ಹಿಟ್ಟನ್ನು ಹಾಕಿ ಇಡಿ ಆಗ ಕೂಡ ಇಟ್ಟು ಚೆನ್ನಾಗಿ ಹುದುಗುತ್ತದೆ.
ಇನ್ನು ನಾವು ತಿಳಿಸಿರುವ ಈ ವಿಧಾನವನ್ನು ಏನಾದರೂ ಎಮರ್ಜೆನ್ಸಿ ಇದ್ದಾಗ ಮಾತ್ರ ಬೆಳೆಸಿ. ಯಾಕೆಂದರೆ ಹಿಟ್ಟು ಈ ರೀತಿ ವೇಗವಾಗಿ ಹುದುಗುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮ್ಮ ಗಮನದಲ್ಲಿರಬೇಕು. ಯಾವಾಗಲೂ ಹಿಟ್ಟು ನಾಲ್ಕರಿಂದ ಏಳು ಗಂಟೆಗಳ ಕಾಲ ನೈಸರ್ಗಿಕ ಪ್ರಕ್ರಿಯೆ ಮೂಲಕ ಹುದುಗಿದರೆ ಅದು ಆರೋಗ್ಯಕ್ಕೆ ಒಳಿತು.
