Kitchen Hacks: ಅಡುಗೆಮನೆಯ(Kitchen)ಸಿಂಕ್ ಅನ್ನು ಸ್ವಚ್ಛವಾಗಿ ಮತ್ತು ಸದಾ ಹೊಳೆಯುವಂತೆ ಇರಿಸಿಕೊಳ್ಳಬೇಕು ಎಂಬುದು ಬಹುತೇಕ ಹೆಣ್ಣುಮಕ್ಕಳ ಇಂಗಿತ. ಆದರೆ ಸಿಂಕ್ ಪದೇ ಪದೇ ಕೊಳೆಯಾಗುತ್ತದೆ. ಊಟ ಹಾಗೂ ಅಡುಗೆ ಮಾಡಿದ ಪಾತ್ರೆ, ಒರೆಸುವ ಬಟ್ಟೆ, ತರಕಾರಿಗಳನ್ನು ತೊಳೆದ ನಂತರ ಸಿಂಕ್ ಕೊಳೆಯಾಗುತ್ತದೆ. ಸ್ಟೇನ್‌ಲೆಸ್ ಸ್ಟೀಲ್ ಸಿಂಕಾಗಿದ್ದರೆ ಅದರ ಹೊಳಪನ್ನು ಕಾಪಾಡಿಕೊಳ್ಳುವುದು ಮತ್ತಷ್ಟು ಸವಾಲು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಸಿಂಕ್ ಅನ್ನು ಹೊಚ್ಚ ಹೊಸದಾಗಿ ಕಾಣುವಂತೆ ಮಾಡಲು ಸುಲಭ ಮತ್ತು ಸರಳ ಸಲಹೆಗಳು(Kitchen Hacks)ಇಲ್ಲಿವೆ. ಇದನ್ನು ನೀವು ಅನುಸರಿಸಿ ನೋಡಿ:
# ಬೇವಿನ ಎಲೆ
ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ಸಂಗತಿ. ಸ್ವಲ್ಪ ಬೇವಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ, ಈ ನೀರನ್ನು ಸಿಂಕ್ ನ ಒಳಗೆ ಹಾಕಿಕೊಂಡು ಆ ಬಳಿಕ ಸೋಪ್ ವಾಟರ್ ಬಳಸಿಕೊಂಡು ಸಿಂಕ್ ನ್ನು ಸ್ಕ್ರಬ್ ಮಾಡಿದರೆ, ಸಿಂಕ್ ಫಳ ಫಳ ಹೊಳೆಯುವುದನ್ನು ಗಮನಿಸಬಹುದು.
ನಿಂಬೆ
ಒಂದು ನಿಂಬೆಹಣ್ಣನ್ನು ಅರ್ಧ ಭಾಗ ಮಾಡಿ. ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ. ಇದರಿಂದ ಸಿಂಕ್‌ನ ಎಲ್ಲಾ ಭಾಗವನ್ನು ಚೆನ್ನಾಗಿ ಉಜ್ಜಿ. ಕೆಲವು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.
ಬಿಸಿ ನೀರು ಮತ್ತು ಬ್ಲೀಚಿಂಗ್ ಹುಡಿ
ಸಿಂಕ್ ಹೆಚ್ಚು ಬಳಕೆ ಮಾಡುವುದರಿಂದ ಎಣ್ಣೆಯಂತಹ ಜಿಡ್ಡಿನ ಪದಾರ್ಥಗಳು ಸಿಂಕ್ ಗೆ ಹೆಚ್ಚು ಅಂಟಿಕೊಂಡಿರುತ್ತದೆ. ಈ ಜಿಡ್ಡನ್ನು ತೆಗೆಯಲು ಬಿಸಿ ನೀರು ಬಳಕೆ ಮಾಡಬಹುದು. ಸಿಂಕ್ ಕ್ಲೀನ್ ಮಾಡಲು ಸ್ವಲ್ಪ ಬ್ಲೀಚಿಂಗ್ ಹುಡಿ ಹಾಕಿಕೊಂಡು ಬಳಿಕ ಬಿಸಿ ನೀರು ಹಾಕಿ ರಿಸಲ್ಟ್ ನೀವೇ ಕಂಡುಕೊಳ್ಳಿ.
ಅಡಿಗೆ ಸೋಡಾ
ಅಡಿಗೆ ಸೋಡಾವು ಖಾದ್ಯಗಳು ಉಬ್ಬಲು, ರುಚಿ ಹೆಚ್ಚಿಸಲು ಮಾತ್ರವಲ್ಲ ಸ್ವಚ್ಛತೆಗೂ ಹೇಳಿ ಮಾಡಿಸಿದ್ದು. ಇದನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಆ ಪೇಸ್ಟ್ ಅನ್ನು ಸಿಂಕ್ ತುಂಬಾ ಹರಡಿ ಸ್ವಲ್ಪ ಸಮಯ ಬಿಡಬೇಕು. ನಂತರ ಸ್ಕ್ರಬ್‌ನಿಂದ ಚೆನ್ನಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.
ಡಿಶ್ ಸೋಪ್ ಡಿಲೈಟ್
ನಿಮ್ಮ ಸಿಂಕ್ ಅಷ್ಟೊಂದು ಗಲೀಜಾಗಿಲ್ಲದೇ ಇದ್ದರೆ, ಡಿಶ್ ಸೋಪನ್ನೂ ಬಳಸಬಹುದು. ಸ್ವಲ್ಪ ಡಿಶ್ ಸೋಪ್ ಅನ್ನು ಸಿಂಕ್‌ಗೆ ಸುರಿದು ಸ್ಪಂಜಿನಿಂದ ಸ್ಕ್ರಬ್ ಮಾಡಬೇಕು. ನಿಯಮಿತವಾಗಿ ಹೀಗೆ ಮಾಡುವುದರಿಂದ ಸಿಂಕ್ ಸುಂದರವಾಗುತ್ತದೆ.
ಆಲಿವ್ ಎಣ್ಣೆ
ಮೃದುವಾದ ಒಂದು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಸ್ಟೇನ್‌ಲೆಸ್ ಸ್ಟೀಲ್ ಸಿಂಕನ್ನು ನಿಧಾನವಾಗಿ ಒರೆಸಿದರಾಯಿತು. ಇದು ನೀರಿನ ಕಲೆಗಳನ್ನು ತೆಗೆದು ಹಾಕುವುದಲ್ಲದೆ ಸಿಂಕನ್ನು ಹೊಳೆಯುವಂತೆ ಮಾಡುತ್ತದೆ.
ವಿನೇಗರ್
ಸಿಂಕ್‌ಗೆ ಅಡಿಗೆ ಸೋಡಾವನ್ನು ಸಿಂಪಡಿಸಿ, ತದ ನಂತರ ಅದರ ಮೇಲೆ ವಿನೆಗರನ್ನು ಸುರಿಯಬೇಕು. ಸ್ಕ್ರಬ್ ಬ್ರಷ್‌ನ ಸಹಾಯದಿಂದ ಸ್ವಲ್ಪ ಗಟ್ಟಿಯಾಗಿ ಉಜ್ಜಬೇಕು. ಸ್ವಲ್ಪ ಸಮಯದ ನಂತರ, ಕೆಲವು ಹನಿ ಸೋಪ್ ಆಯಿಲ್ ಮತ್ತು ಸ್ವಲ್ಪ ನೀರನ್ನು ಸೇರಿಸಿ, ಉಜ್ಜಿ. ನಂತರ ನೀರಿನಿಂದ ತೊಳೆಯಿರಿ. ಸಿಂಕ್ ಬಹಳಷ್ಟು ಶುಚಿಯಾಗುತ್ತದೆ.
ಈ ಎಲ್ಲಾ ವಸ್ತುಗಳು ಸ್ಟೇನ್‌ಲೆಸ್ ಸ್ಟೀಲ್ ಸಿಂಕ್ ತೊಳೆಯಲು ಸಹಾಯ ಮಾಡುತ್ತವೆ, ಮಾತ್ರವಲ್ಲ ಅಡುಗೆಮನೆ ಅಂದ ಹೆಚ್ಚಿಸುತ್ತವೆ. ಆದರೆ ಬಳಸುವ ಮುನ್ನ ಸ್ವಲ್ಪ ಜಾಗೃತೆ ಇರಲಿ.
ಇದನ್ನೂ ಓದಿ: Question Paper: ‘ಅಳಲು ಅನುಮತಿ ಇದೆ, ಆದರೆ ಸದ್ದು ಬಾರದಂತೆ ಅಳಬೇಕು’ !! ಅರೆ.. ಏನಿದು ವಿಚಿತ್ರ ಪ್ರಶ್ನೆ ಪತ್ರಿಕೆ ?!
