Mangaluru : ಮಂಗಳೂರಿನ ಪೆರ್ಮುದೆ ಪೇಟೆಯಲ್ಲಿರುವ ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ಲಾಕರ್‌ನಲ್ಲಿದ್ದ ಸುಮಾರು 1 ಕೆ.ಜಿ. ಚಿನ್ನಾಭರಣ ಕಳವು ಮಾಡಲಾದ ಘಟನೆ ಬೆಳಕಿಗೆ ಬಂದಿದೆ.
ಹೌದು, ಮಂಗಳವಾರ ಪೆರ್ಮುದೆಯ ಜಾನ್ವಿನ್ ಪಿಂಟೋ ಅವರ ಮನೆಯಿಂದ ಈ ಕಳ್ಳತನ ನಡೆದಿದೆ. ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್ ಪಿಂಟೋ ಕುವೈಟ್‌ನಲ್ಲಿರೋ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನು ಮನಗಂಡ ಕಳ್ಳರು ಈ ಕೃತ್ಯ ಎಸದಿದ್ದಾರೆ.
ಅಚ್ಚರಿ ಏನೆಂದರೆ ಇವರ ಮನೆಯ ಸುತ್ತ 16 ಸಿಸಿ ಕೆಮರಾ ಇದ್ದರೂ, ಮುಧೋಳ, ಜರ್ಮನ್ ಶೆಫರ್ಡ್ ಸೇರಿದಂತೆ 8 ಸಾಕು ನಾಯಿಗಳಿದ್ದರೂ ಇವುಗಳ ಕಣ್ತಪ್ಪಿಸಿ ಕೃತ್ಯವೆಸಗಿದ್ದಾರೆ. ಕೆಮರಾ ಇಲ್ಲದ ಕಡೆಯಿಂದ ಬಂದು ಕೆಮರಾದ ದಿಕ್ಕನ್ನು ಬದಲಿಸಿ ಕಿಟಿಕಿಯ ಕಬ್ಬಿಣದ ರಾಡ್ ಅನ್ನು ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ.
ಲಾಕರ್‌ನಲ್ಲಿದ್ದ ಅಪಾರ ಚಿನ್ನಾಭರಣ, ವಾಚ್‌ಗಳನ್ನು ಕಳವು ಮಾಡಿದ್ದಾರೆ. ಲಾಕರ್ ಕೀಯನ್ನು ಬಳಸಿ ಅದನ್ನು ತೆರೆದಿರುವುದು ಕಂಡುಬಂದಿದೆ. ಪ್ರತೀದಿನ ಮನೆಯ ನಾಯಿಗಳಿಗೆ ಆಹಾರ ಹಾಕಲು ಇಬ್ಬರು ಕೆಲಸದಾಳುಗಳು ಬರುತ್ತಿದ್ದರು. ಎಂದಿನಂತೆ ಅವರು ಬೆಳಗ್ಗೆ ನಾಯಿಗಳಿಗೆ ಆಹಾರ ಹಾಕಲು ಬಂದಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಅವರು ಕುವೈಟ್‌ನಲ್ಲಿರುವ ಮಾಲಕರಿಗೆ ಮಾಹಿತಿ ನೀಡಿದ್ದರು.
