Koppala: ಬೇಕರಿಗೆ ನುಗ್ಗಿ ಮನಬಂದಂತೆ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶನಿವಾರ ಕುಷ್ಟಗಿ ತಾಲೂಕಿ ತಾವರಗೇರಾದಲ್ಲಿ ನಡೆದಿದೆ.

ಹುಸೇನಪ್ಪ ನಾರಿನಾಳ (35)ಹತ್ಯೆಗೊಳಗಾದ ವ್ಯಕ್ತಿ.
ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ ದುಷ್ಕರ್ಮಿಗಳು ಚನ್ನಪ್ಪನನ್ನು ಬೇಕರಿಯಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿ, ನಂತರ ಬೇಕರಿಯಿಂದ ಹೊರಗೆ ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ತಾವರಗೇರಾ ಠಾಣೆಯ ಪೊಲೀಸರಿಂದ 7 ಆರೋಪಿಗಳ ಬಂಧನವಾಗಿದೆ.
ಈ ಕೊಲೆಗೆ ಕಾರಣ ನಾರಿನಾಳ ಕುಟುಂಬಗಳ ಮಧ್ಯೆ ಇದ್ದ 20 ವರ್ಷಗಳ ಹಿಂದಿನ ದ್ವೇಷ. ನಿನ್ನೆ ರಾತ್ರಿ ಚನ್ನಪ್ಪ ನಾರಿನಾಳ ಆಸ್ಪತ್ರೆಗೆ ಹೋಗಿ ಬರುವ ಸಮಯದಲ್ಲಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಸಿಂಧನೂರು ಕ್ರಾಸ್ ಬಳಿ ಬಂದಾಗ ಬೈಕ್ ಮೇಲೆ ಹೊರಟಿದ್ದ ಚನ್ನಪ್ಪನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಆಗ ಚನ್ನಪ್ಪ ಬೈಕ್‌ನಿಂದ ಇಳಿದು ಅಲ್ಲೇ ಇದ್ದ ಬೇಕರಿಗೆ ಹೋಗಿ ರಕ್ಷಣೆ ಕೋರಿದ್ದಾನೆ. ಈ ಸಮಯದಲ್ಲಿ ಅಲ್ಲಿಗೆ ಬಂದ ದುಷ್ಕರ್ಮಿಗಳು ಚನ್ನಪ್ಪನ ಮೇಲೆ ಮಚ್ಚಿನ ಮೂಲಕ ನಿರಂತರ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಒಟ್ಟು 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಏಳು ಜನರ ಬಂಧನವಾಗಿದ್ದು, ಇನ್ನು ಮೂರು ಜನರನ್ನು ಅರೆಸ್ಟ್ ಮಾಡುತ್ತೇವೆ. ಇಬ್ಬರು ಮಚ್ಚು ಬಳಸಿ ಕೊಲೆ ಮಾಡಿದ್ದು, ಮಚ್ಚುಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ ಪ್ರತಿಕ್ರಿಯೆ ನೀಡಿದ್ದಾರೆ.
ತಾವರಗೇರಾ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
