Murder: ಟೆನ್ನಿಸ್ ಅಕಾಡೆಮಿಯನ್ನು ಮುಚ್ಚಲು ನಿರಾಕರಣೆ ಮಾಡಿದ ಮಗಳನ್ನು ತಂದೆಯೊಬ್ಬ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ರಾಧಿಕಾ ಯಾದವ್ (25) ಹತ್ಯೆಗೊಳಗಾದ ಟೆನ್ನಿಸ್ ಆಟಗಾರ್ತಿ. ದೀಪಕ್ ಯಾದವ್ (47) ಆರೋಪಿ ತಂದೆ.
ರೀಲ್ಸ್ ನೋಡುತ್ತಿದ್ದಕ್ಕೆ ಟೆನ್ನಿಸ್ ಆಟಗಾರ್ತಿಯನ್ನು ತಂದೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಪೊಲೀಸರ ತನಿಖೆ ವೇಳೆ ನಿಜಾಂಶ ಬಯಲುಗೊಂಡಿದೆ. ರಾಧಿಕಾ ಯಾದವ್ ಟೆನ್ನಿಸ್ ಆಟಗಾರ್ತಿಯಾಗಿದ್ದು, ಭುಜದ ಭಾಗಕ್ಕೆ ಗಾಯವಾಗಿತ್ತು. ಮಕ್ಕಳಿಗೆ ತರಬೇತಿ ನೀಡಲು ಟೆನ್ನಿಸ್ ಅಕಾಡೆಮಿಯೊಂದನ್ನು ಅವರು ಈ ಕಾರಣದಿಂದ ಆರಂಭ ಮಾಡಿದ್ದರು. ಆದರೆ ಆಕೆಯ ತಂದೆ ದೀಪಕ್ ಯಾದವ್, ಅಕಾಡೆಮಿಯನ್ನು ಮುಚ್ಚಲು ಮಗಳ ಬಳಿ ಹೇಳಿದ್ದರು.
ಜನರು ದೀಪಕ್ ಯಾದವ್ ಅವರಲ್ಲಿ ನೀವು ನಿಮ್ಮ ಮಗಳ ಗಳಿಕೆಯಲ್ಲಿ ಬದುಕುತ್ತಿದ್ದೀರಿ ಎಂದು ಹೀಯಾಳಿಸುತ್ತಿದ್ದರು. ದೀಪಕ್ ಇದರಿಂದ ಅಕಾಡೆಮಿಯನ್ನು ಮುಚ್ಚಲು ಹೇಳಿದ್ದರು. ಮಗಳು ಇದಕ್ಕೆ ಒಪ್ಪಲಿಲ್ಲ. ಜು.10 ರಂದು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಗಳ ಮೇಲೆ ಹಿಂದಿನಿಂದ ಬಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಗುಂಡಿನ ಶಬ್ದಕ್ಕೆ ರಾಧಿಕಾ ಚಿಕ್ಕಪ್ಪ ಓಡಿ ಬಂದಿದ್ದು, ಕೂಡಲೇ ರಾಧಿಕಾಳನ್ನು ಗುರುಗ್ರಾಮದಲ್ಲಿರುವ ಏಷ್ಯಾ ಮೊರಿಂಗೋ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಅಷ್ಟರಲ್ಲಾಗಲೇ ಆಕೆ ಮೃತ ಹೊಂದಿದ್ದಳು ಎಂದು ವೈದ್ಯರು ದೃಢಪಡಿಸಿದ್ದರು. ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ತಂದೆ ದೀಪಕ್ ಯಾದವ್‌ನನ್ನು ಪೊಲೀಸರು ಬಂಧನ ಮಾಡಿದ್ದಾರೆ.
