Home » Crime: ಅರಣ್ಯ ಇಲಾಖೆ ವಶಕ್ಕೆ ಪಡೆದ ಹುಲಿ ಉಗುರು, ಜಿಂಕೆ ಕೊಂಬು ನಕಲಿ?

Crime: ಅರಣ್ಯ ಇಲಾಖೆ ವಶಕ್ಕೆ ಪಡೆದ ಹುಲಿ ಉಗುರು, ಜಿಂಕೆ ಕೊಂಬು ನಕಲಿ?

by ಕಾವ್ಯ ವಾಣಿ
0 comments

Crime: ‌ಕೆಲವು ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿ ಮತ್ತು ಅಧಿಕಾರಿಗಳಿಂದ ವಶಪಡಿಸಿಕೊಂಡ ಹುಲಿ ಉಗುರು, ಜಿಂಕೆ ಚರ್ಮ, ಕೊಂಬು ಸೇರಿದಂತೆ ನಾನಾ ಪ್ರಾಣಿಗಳ ಅಂಗಾಂಶ ಮಾದರಿಗಳನ್ನು ಹೈದರಾಬಾದ್ ಹಾಗೂ ಡೆಹರಾಡೂನ್‌ನಲ್ಲಿರುವ ಎಫ್‌ಎಸ್‌ಎಲ್‌ಗೆ ಕಳುಹಿಸಿ ದೃಢಪಡಿಸಿಕೊಳ್ಳಲು ವರದಿ ತರಿಸಿಕೊಳ್ಳಲಾಗುತ್ತದೆ. ಆದರೆ ಒಂದೂವರೆ ವರ್ಷದ ಹಿಂದೆ ರಾಜ್ಯದಲ್ಲಿ ವಶಕ್ಕೆ ಪಡೆದ ಒಟ್ಟು 45ಕ್ಕೂ ಹೆಚ್ಚು ಹುಲಿ ಉಗುರು ಹಾಗೂ 660 ವಿವಿಧ ವನ್ಯಜೀವಿ ಅಂಗಾಂಶಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಿಲ್ಲ. ಒಂದು ಅಂಗಾಂಶ ಎಫ್‌ಎಸ್‌ಎಲ್‌ಗೆ ಕಳಿಸಿ ವರದಿ ತರಿಸಿಕೊಳ್ಳಲು 15 ಸಾವಿರ ರೂ. ವೆಚ್ಚವಾಗಲಿದೆ.

ರಾಜ್ಯ ಸರಕಾರ 3 ತಿಂಗಳ ಕಾಲಾವ ಕಾಶ ನೀಡಿ ಸ್ವಯಂ ಪ್ರೇರಿತವಾಗಿ ಹುಲಿ ಉಗುರು ಸೇರಿದಂತೆ ಎಲ್ಲ ಅಂಗಾಂಶಗಳ ಸರೆಂಡರ್‌ಗೆ ಆದೇಶಿಸಿತ್ತು. ಬೆಂಗಳೂರು-15, ಚಿಕ್ಕಮಗಳೂರು-2, ಶಿರಸಿ-4, ಹಳಿಯಾಳ-6, ಮಂಗಳೂರು-3, ಮಂಡ್ಯ-2, ಶ್ರೀರಂಗಪಟ್ಟಣ-2, ಗೋಕಾಕ-1, ಧಾರವಾಡ-6, ಬೆಳಗಾವಿ-4 ಸೇರಿದಂತೆ ರಾಜ್ಯಾದ್ಯಂತ ಒಟ್ಟು 45ಕ್ಕೂ ಹೆಚ್ಚು ಹುಲಿ ಉಗುರು ವಶಕ್ಕೆ ಪಡೆದಿದ್ದರು. ಹುಲಿ ಉಗುರು ಜತೆಗೆ ಜಿಂಕೆ, ಕರಡಿ, ಚಿರತೆ ಸೇರಿದಂತೆ ವಿವಿಧ ವನ್ಯಜೀವಿ ಅಂಗಾಂಶಗಳ ಮಾದರಿಯ ಒಟ್ಟು 705 ವಸ್ತು ವಶಕ್ಕೆ ಪಡೆಯಲಾಗಿದೆ. ಇಂದಿಗೂ ಇವುಗಳು ಎಫ್‌ಎಸ್‌ಎಲ್‌ಗೆ ಕಳಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.

‘ವಶಕ್ಕೆ ಪಡೆದ ಹುಲಿ ಉಗುರುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದರೆ ಪ್ರಯೋಜನವಿಲ್ಲ. ಒಂದು ಹುಲಿ ಉಗುರಿನ ತಪಾಸಣೆಗೆ 15 ಸಾವಿರಕ್ಕೂ ಹೆಚ್ಚು ಹಣ ವ್ಯಯವಾಗುತ್ತದೆ. ವಶಕ್ಕೆ ಪಡೆದ ಎಲ್ಲ ಉಗುರುಗಳನ್ನು ನಾಶಪಡಿಸುವಂತೆ ಸೂಚಿಸಲಾಗಿದೆʼ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಶೇ.99ರಷ್ಟು ನಕಲಿ?

ವಶಕ್ಕೆ ಪಡೆದ ಹುಲಿ ಉಗುರುಗಳು ಶೇ.99ರಷ್ಟು ನಕಲಿಯಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿವೆ. ಆದರೆ, ಅವನ್ನು ಖಚಿತ ಪಡಿಸಿಕೊಳ್ಳಲು ಎಫ್‌ಎಸ್‌ಎಲ್‌ಗೆ ಕಳಿಸುವುದು ಅನಿವಾರ್ಯ ಎನ್ನುತ್ತಾರೆ ಅಧಿಕಾರಿಗಳು.

‘ವಶಕ್ಕೆ ಪಡೆದ 6 ಹುಲಿ ಉಗುರು ಸೇರಿದಂತೆ ಎಲ್ಲ ಅಂಗಾಂಶಗಳನ್ನು ಅನುದಾನದ ಕೊರತೆ ಹಾಗೂ ಕೆಲ ತಾಂತ್ರಿಕ ಕಾರಣದಿಂದ ಎಫ್‌ಎಸ್‌ಎಲ್‌ಗೆ ಕಳಿಸಲು ಸಾಧ್ಯವಾಗಿಲ್ಲ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದುʼ ಎಂದು ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ಹುಲಗಣ್ಣವರ ತಿಳಿಸಿದ್ದಾರೆ.

You may also like