Bangalore: ಮದುವೆ ದಿನವೇ ವರ ಹಾಗೂ ಆತನ ಕುಟುಂಬದವರು ಮಂಟಪದಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೈಸೂರಿನ ಪ್ರೇಮ್ ಚಂದ್ ಪರಾರಿಯಾಗಿರುವ ವರ. ಸಂತ್ರಸ್ತೆ ಮತ್ತು ಪ್ರೇಮ್ ಚಂದ್ ಇವರಿಬ್ಬರೂ ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಒಂದೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ ಸ್ನೇಹವಾಗಿತ್ತು. ಬಿಇ ಬಳಿಕ ಎಂಎಸ್ ಮುಗಿಸಿ ಸಂತ್ರಸ್ತೆ ಫ್ರಾನ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಪ್ರೇಮ್ ಕೂಡಾ ಪ್ಯಾರಿಸ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಇವರಿಬ್ಬರು ಪ್ರೀತಿ ಮಾಡುತ್ತಿದ್ದರಿಂದ ಇಬ್ಬರು ತಮ್ಮ ಮನೆಯವರನ್ನು ಒಪ್ಪಿ ಕಳೆದ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಾ.3 ರಂದು ಪ್ರೇಮ್ ಮತ್ತು ಸಂತ್ರಸ್ತೆಯ ಮದುವೆ ದಿನಾಂಕ ನಿಶ್ಚಯವಾಗಿತ್ತು. ಗಾಂಧಿನಗರದ ನಂದಿ ಕ್ಲಬ್ ಮಂಟಪದಲ್ಲಿ ಮದುವೆ ನಡೆಯೋದಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮದುವೆ ಕಾರ್ಯಕ್ರಮವೆಲ್ಲ ಫೆ.28 ರಂದು ಪ್ರಾರಂಭವಾಗಿತ್ತು. ಹಳದಿ ಶಾಸ್ತ್ರ ಎಲ್ಲ ಮಾ.1 ರಂದು ಆಗಿತ್ತು. ಈ ಸಂದರ್ಭದಲ್ಲಿ ಪ್ರೇಮ್ ತಂದೆ ಶಿವಕುಮಾರ್ ಪವಾನಿ, ತಾಯಿ ರಾಧ, ಸಂಬಂಧಿ ಮಂಜು, ಭರತ್ ಸೇರಿ 50 ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನ ಹಾಗೂ ಬೆಂಜ್ ಕಾರು ನೀಡುವಂತೆ ವಧುವಿನ ತಂದೆ ಬಳಿ ಕೇಳಿದ್ದಾರೆ. ಅಷ್ಟೆಲ್ಲಾ ಕೊಡಲು ಸಾಧ್ಯವಿಲ್ಲ, ಈಗಾಗಲೇ ಮದುವೆಗೆ 25 ಲಕ್ಷ ಖರ್ಚಾಗಿದೆ ಎಂದು ಹೇಳಿದರು.
ಅನಂತರ ಪ್ರೇಮ್ ಹಾಗೂ ಆತನ ಕುಟುಂಬದವರು ಮದುವೆ ಮಂಟಪದಿಂದ ಪರಾರಿಯಾಗಿದ್ದು, ಬೆಳಗ್ಗೆ ಮದುವೆ ಶಾಸ್ತ್ರಕ್ಕೆ ವರನನ್ನು ಕರೆಯಲೆಂದು ಹೋದಾಗ ವಿಷಯ ತಿಳಿದು ಬಂದಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಂತ್ರಸ್ತೆ ತಂದೆ ನೀಡಿದ್ದಾರೆ. ದೂರಿನಲ್ಲಿ ವರ ಪ್ರೇಮ್ ವಧುವನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿರುವ ಕುರಿತು ಕೂಡಾ ಉಲ್ಲೇಖ ಮಾಡಲಾಗಿದೆ.
