Bantwala: ಸೋಮವಾರ ಮಧ್ಯಾಹ್ನ ಬಂಟ್ವಾಳದಲ್ಲಿ ಪಿಕಪ್ ವಾಹನ ಚಾಲಕನ ಹತ್ಯೆ ನಡೆದಿದ್ದು, ಮಂಗಳವಾರ ಮಧ್ಯಾಹ್ನ ಮೃತನ ಪಾರ್ಥಿಕ ಶರೀರ ಆಗಮನದ ವೇಳೆ ಬಿ.ಸಿ.ರೋಡ್ ಸಮೀಪ ಕೈಕಂಬದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಲಾಗಿದ್ದು, ಬೈಕ್ ಶೋ ರೂಂ ಒಂದರ ಮೇಲೆ ಕಲ್ಲು ತೂರಾಟ ನಡೆದಿರುವ ಕುರಿತು ವರದಿಯಾಗಿದೆ.
ಕೈಕಂಬಕ್ಕೆ ಮೃತ ರಹಿಮಾನ್ ಪಾರ್ಥೀವ ಶರೀರ ಬಂದಾಗ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಘಟನೆಯ ಕುರಿತು ಸೆರೆ ಹಿಡಿಯಲು ಬಂದ ರಾಷ್ಟ್ರೀಯ ಮಾಧ್ಯಮದ ಕ್ಯಾಮರಾಮೆನ್ ಒಬ್ಬರನ್ನು ಕಾರಿನಿಂದ ಇಳಿಯಲು ಬಿಡದೆ ಮತ್ತೆ ಕಾರಿಗೆ ತಳ್ಳಿ ಗುಂಪು ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಪತ್ರಿಕಾ ಛಾಯಾಗ್ರಾಹಕರಿಗೆ ಧಮ್ಕಿ ಹಾಕಲಾಗಿದೆ. ಪತ್ರಕರ್ತರೊಬ್ಬರ ಮೊಬೈಲ್ ಕಸಿದು ಫೊಟೋಗಳನ್ನು ಡಿಲೀಸ್ ಮಾಡಲಾಯಿತು. ಕೂಡಲೇ ಪತ್ರಕರ್ತರ ನೆರವಿಗೆ ಧಾವಿಸಿ ಆಕ್ರೋಷಿತರನ್ನು ಸಮಾಧಾನ ಮಾಡಿದ ಕೆಲವರು ಪತ್ರಿಕರ್ತರಿಗೆ ರಕ್ಷಣೆಯನ್ನು ನೀಡಿದರು. ನಂತರ ತಮ್ಮದೇ ವಾಹನದಲ್ಲಿ ಹೆದ್ದಾರಿ ತನಕ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಶವಯಾತ್ರೆಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೈಕಂಬದಲ್ಲಿರುವ ಬೈಕ್ ಶೋರೂಂ ಒಂದರ ಮೇಲೆ ಕಲ್ಲು ತೂರಾಟ ನಡೆದಿದೆ. ಶೋರೂಂ ಬಂದ್ ಮಾಡಲು ಕಂಪನಿ ಅನುಮತಿ ನೀಡಿಲ್ಲ ಎಂದು ಸಿಬ್ಬಂದಿ ಹೇಳಿದರೂ, ಇತರ ಶೋರೂಂಗಳು ಮುಚ್ಚಿರುವುದನ್ನು ಗುಂಪು ತೋರಿಸಿದೆ. ನಂತರ ಸಿಬ್ಬಂದಿ ಶೋರೂಂನ ಶಟರ್ ಎಳೆದಿದ್ದಾರೆ. ಕಲ್ಲು ತೂರಾಟದ ಪರಿಣಾಮ ಶೋರೂಂನ ಗಾಜಿನ ಬಾಗಿಲುಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಕೈಕಂಬ, ಬಿ.ಸಿ.ರೋಡ್‌ನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
