Bangalore: ಹಾಲು ಕೊಡುವ ಕಾಮಧೇನು ಗೋವಿನ ಜೊತೆ ದುರುಳರು ಅದರ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆಯೊಂದು ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದಿತ್ತು.
ಈ ಮೂರು ಹಸುಗಳು ಕರ್ಣ ಎಂಬುವವರಿಗೆ ಸೇರಿದ್ದು. ಹಸುಗಳ ಕೆಚ್ಚಲನ್ನೇ ಕೊಯ್ದ ದುಷ್ಟರು ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ರವಿವಾರ ಬೆಳ್ಳಂಬೆಳಗ್ಗೆ (ಜ.12) ಈ ಘಟನೆ ಬೆಳಕಿಗೆ ಬಂದಿದೆ. ಹಸುಗಳನ್ನು ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಸುಗಳು ಕರ್ಣ ಎಂಬುವವರಿಗೆ ಸೇರಿದ್ದು. ಒಟ್ಟು 8 ಹಸುಗಳನ್ನು ಕರ್ಣ ಅವರು ಸಾಕುತ್ತಿದ್ದು, ಇವುಗಳನ್ನು 3-4 ಹಸುಗಳು ಮನೆಯಿಂದ ಸ್ವಲ್ಪ ದೂರದಲ್ಲಿರುವ ರಸ್ತೆಯಲ್ಲಿ ಮಲಗಿದೆ. ತಡರಾತ್ರಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ.
ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದು, ಸಿಸಿಟಿವಿ ದೃಶ್ಯಗಳ ಪರಿಶೀಲನೆಯನ್ನು ಮಾಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 20 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗೂ ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರು ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿದ್ದು, ಚಿಕ್ಕಪೇಟೆ ಎಸಿಪಿ ರಮೇಶ್ ಕೂಡಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
“ಇದೊಂದು ಅಮಾನವೀಯ ಕೃತ್ಯ. ಗೋವುಗಳನ್ನು ನಾವು ದೇವರು ಎಂದು ಪೂಜೆ ಮಾಡುತ್ತೇವೆ. ಆದರೆ ಆ ಗೋಮಾತೆಯ ಕೆಚ್ಚಲನ್ನೇ ಕಿಡಿಗೇಡಿಗಳು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಕೂಡಲೇ ಕಿಡಿಗೇಡಿಗಳ ಬಂಧನವಾಗಬೇಕು. ಈ ಸರಕಾರ ಬಂದ ಮೇಲೆ ಇಂತಹ ಕೃತ್ಯಗಳು ಹೆಚ್ಚು ಹೆಚ್ಚು ಆಗುತ್ತಿದೆ. ವಿಕೃತಿ ಮೆರೆದವರ ಬಂಧನ ಆಗುವವರೆಗೆ ಹೋರಾಟ ನಿಲ್ಲುವುದಿಲ್ಲ” ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಂದ ವರದಿ ಕೇಳಲಾಗಿದೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹಸುಗಳ ಮಾಲೀಕ ಕರ್ಣ ಅವರು, ಕೂಡಲೇ ದುಷ್ಕೃತ್ಯ ಮೆರೆದವರ ಬಂಧನವಾಗಬೇಕು. ಇಲ್ಲ ನಮ್ಮ ಕೈಯಲ್ಲಿ ಕೊಡಿ ನಾವು ಬುದ್ಧಿ ಕಲಿಸುತ್ತೇವೆ. ಹಸುವಿನ ಕಾಲಿಗೆ ಮಚ್ಚಿನಲ್ಲಿ ಹೊಡೆದಿದ್ದು, ಕೆಚ್ಚಲು ಕತ್ತರಿಸಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ.
