ಬೆಂಗಳೂರು: ಮನೆಯ ಯಜಮಾನನ ಬ್ರಾಂಡ್ ವಾಚ್ ಕದ್ದು ನಂತರ ಅದನ್ನು ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮನೆ ಕೆಲಸದಾಕೆ ಇದೀಗ ರೆಡ್‌ಹ್ಯಾಂಡ್ ಆಗಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಸರ್ಜಾಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಈ ಫೋಟೋವನ್ನು ಇಟ್ಟುಕೊಂಡು ಮನೆ ಕೆಲಸದಾಕೆಯನ್ನು ಪತ್ತೆ ಮಾಡಿದ್ದಾರೆ.
ಆರೋಪಿ ದೊಡ್ಡಕನ್ನನಹಳ್ಳಿ ನಿವಾಸಿ ಸೌಮ್ಯ (26) ಎಂದು ಗುರುತಿಸಲಾಗಿದೆ.
ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ ಕಂಪನಿಯೊಂದರ ಹಿರಿಯ ಉತ್ಪನ್ನ ವ್ಯವಸ್ಥಾಪಕ ಆಗಿರುವ ರೋಹಿತ್ (39) ಅವರು ಜ.5 ರಂದು ಈ ಕುರಿತು ದೂರನ್ನು ನೀಡಿದ್ದಾರೆ. ಅವರ ಮನೆಯಿಂದ ಡಿ.8,2025 ರಂದು 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೊತೆ ಕಿವಿಯೋಲೆಗಳು, ಮೈಕೆಲ್ ಕೋರ್ಸ್ ಬ್ರಾಂಡ್ ಗಡಿಯಾರ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಸೌಮ್ಯ ಳನ್ನು ಪ್ರಶ್ನೆ ಮಾಡಿದಾಗ, ನಾನು ಕದ್ದಿಲ್ಲ ಎಂದು ಹೇಳಿ, ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾಳೆ.
ಡಿ.28 ರಂದು ರೋಹಿತ್ ಅವರು ಆಕಸ್ಮಿಕವಾಗಿ ವಾಟ್ಸಪ್ ಪರಿಶೀಲನೆ ಮಾಡುತ್ತಿದ್ದಾಗ, ಸೌಮ್ಯ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಬ್ರಾಂಡ್ ವಾಚ್ ಧರಿಸಿದ ಫೋಟೋ ಹಾಕಿರುವುದು ಕಂಡು ಬಂದಿದೆ. ಇದನ್ನು ರೋಹಿತ್ ತನ್ನ ಕುಟುಂಬದವರಲ್ಲಿ ಹೇಳಿದ್ದಾರೆ. ಆಗ ಮನೆ ಮಂದಿ ಇದು ನಮ್ಮ ವಾಚ್ ಎಂದು ಹೇಳಿದ್ದಾರೆ. ಸೌಮ್ಯ ಹಾಕಿದ ವಾಟ್ಸಪ್ ಸ್ಕ್ರೀನ್‌ಶಾಟ್ ತೆಗೆದು ಪೊಲೀಸರಿಗೆ ರೋಹಿತ್ ದೂರನ್ನು ನೀಡಿದ್ದಾರೆ.
ಜ.8 ರಂದು ಸೌಮ್ಯ ಬಂಧನವಾಗಿದೆ. ವಿಚಾರಣೆ ಸಂದರ್ಭ ನಿಜ ಒಪ್ಪಿದ್ದಾಳೆ. ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 20000 ಮೌಲ್ಯದ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ.
