Crime: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕತ್ತು ಹಿಸುಕಿ ಕೊಂದಿದ್ದು, ಬಳಿಕ ಮೃತದೇಹದ ಬಳಿ ಹಾವನ್ನು ಬಿಟ್ಟು ಕಥೆ ಕಟ್ಟಿ ಸಿಕ್ಕಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನ ಅಕ್ಟರ್‌ಪುರ್ ಸಾದತ್ ಗ್ರಾಮದಲ್ಲಿ ನಡೆದಿದೆ.
ಅಮಿತ್ ಕಶ್ಯಪ್ ಕೊಲೆಯಾದ ವ್ಯಕ್ತಿ. ಭಾನುವಾರ ಮುಂಜಾನೆ ಅಮಿತ್ ಹಾವು ಕಡಿತದಿಂದಾಗಿ ಮೃತಪಟ್ಟಿದ್ದಾಗಿ ಮಹಿಳೆ ಹೇಳಿಕೊಂಡಿದ್ದು, ಅದೇ ಜಾಗದಲ್ಲಿ ಜೀವಂತ ಹಾವು ಕೂಡಾ ಪತ್ತೆಯಾಗಿದೆ. ಅಂತೆಯೇ ಅಮಿತ್‌ನ ದೇಹದಲ್ಲೂ ಹಾವು ಕಡಿತಹ ಹಲವಾರು ಗುರುತುಗಳು ಕಂಡುಬಂದಿದೆ. ಆದರೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಮಿತ್ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ.
ವಿಚಾರಣೆಯ ಸಮಯದಲ್ಲಿ ಅಮಿತ್‌ನ ಪತ್ನಿ 24 ವರ್ಷದ ರವಿತಾ, ತನ್ನ ಪ್ರಿಯಕರ ಅಮರದೀಪ್ ಸಿಂಗ್ (28) ಜೊತೆಗೆ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ರವಿತಾ ತನ್ನ ಪತಿಯ ಸ್ನೇಹಿತನಾಗಿದ್ದ ಅಮರದೀಪ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಆದ್ದರಿಂದ ಅಮರ್‌ದೀಪ್ ಒಬ್ಬ ಹಾವಾಡಿಗನಿಂದ 1,000 ರೂ.ಗೆ ಹಾವನ್ನು ಖರೀದಿಸಿ, ಅಮಿತ್ ಅನ್ನು ಕತ್ತು ಹಿಸುಕಿ ಕೊಂದ ನಂತರ, ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಆಕೆ ಹಾವನ್ನು ಅವನ ದೇಹದ ಬಳಿ ಇಟ್ಟಿದ್ದಾರೆ.
ವಿಚಾರಣೆಯ ಸಮಯದಲ್ಲಿ, ರವಿತಾ ಮತ್ತು ಅಮರ್‌ದೀಪ್ ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೊಲೆಯ ಬಳಿಕ ಶವದ ಕೆಳಗೆ ಸಿಲುಕಿಸಿ ಇಟ್ಟಿದ್ದ ಹಾವು ಆತಂಕದಿಂದ ಅಮಿತ್‌ಗೆ ಹಲವಾರು ಬಾರಿ ಕಚ್ಚಿದೆ ಎಂದು ವಿವರಿಸಿದ್ದಾರೆ.
