

ಬೆಳ್ತಂಗಡಿ: ನಿಯಮ ಬಾಹಿರವಾಗಿ ಸಹೋದರನಿಗೆ ಗ್ರಾಮ ಪಂಚಾಯತ್ ನ ಕಾಮಗಾರಿ ಗುತ್ತಿಗೆ ನಿರ್ವಹಣೆ ಮಾಡಲು ಅವಕಾಶ ನೀಡಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ ಅವರ ಸದಸ್ಯತ್ವ ಅನೂರ್ಜಿತಗೊಳಿಸಿ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ದಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳು ಆದೇಶ ನೀಡಿರುವ ಕುರಿತು ವರದಿಯಾಗಿದೆ.
ಜಗದೀಶ್ ಹೆಗ್ಡೆ ಅವರು ತಮ್ಮ ಅಧಿಕಾರದ ಸಮಯದಲ್ಲಿ ಗ್ರಾಮಪಂಚಾಯತ್‌ಗೆ ಕುರಿತಂತೆ ಕಾಮಗಾರಿಗಳನ್ನು ತನ್ನ ಸಹೋದರ ಅಮರೇಶ ಹೆಗ್ಡೆ ಅವರ ಮೂಲಕ ಗುತ್ತಿಗೆಯನ್ನು ಪಡೆದು ನಿರ್ವಹಣೆ ಮಾಡಿದ್ದು, ನಿರ್ವಹಿಸಿದ ಎಲ್ಲಾ ಕಾಮಗಾರಿಗಳ ಕುರಿತು ಪಂಚಾಯತ್ ಅಳತೆ ಪುಸ್ತಕದಲ್ಲಿ ದಾಖಲಾಗಿದ್ದು, ಕಾಮಗಾರಿಗಳ ಬಿಲ್ ಪಾವತಿಗೆ ಜಗದೀಶ್ ಹೆಗ್ಡೆ ಅವರು ಸಹಕಾರ ನೀಡಿ ಕರ್ತವ್ಯಲೋಪ ಎಸಗಿ ಕಾಮಗಾರಿಗಳನ್ನು ನಿಯಮ ಬಾಹಿರವಾಗಿ ತನ್ನ ಸಹೋದರನಿಗೆ ಗುತ್ತಿಗೆ ನೀಡಿರುವ ಆರೋಪ ಸಾಬೀತಾಗಿದೆ.
ಇದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ)(1)(v) ಅನ್ವಯ ಸದಸ್ಯತ್ವ ರದ್ದುಗೊಳಿಸಲಾಗಿದೆ. ಈ ಮೂಲಕ ಯಾವುದೇ ಪಂಚಾಯತ್ ಗೆ ಮುಂದಿನ ಆರು ವರ್ಷಗಳ ವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹ ಮಾಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳಾದ (ಗ್ರಾಮ ಪಂಚಾಯತ್ ) ಶಿವಕುಮಾರ್ ಅವರು 05-01-2026 ರಂದು ಆದೇಶ ನೀಡಿರುವುದಾಗಿ ವರದಿಯಾಗಿದೆ.
ಜಗದೀಶ್ ಹೆಗ್ಡೆ ಅವರ ವಿರುದ್ಧ ಸ್ಥಳೀಯ ನಿವಾಸಿ ಹರೀಶ್ ಕುಮಾರ್ ಅವರು ಇಲಾಖೆಗೆ ದೂರನ್ನು ನೀಡಿದ್ದರು.













