Belagavi: ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ತಿಂಗಳ ಮಗುವೊಂದು ಸಾವಿಗೀಡಾಗಿರುವ ಘಟನೆ ನಡೆದಿದೆ. ಅಥಣಿಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ಮೋಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ, ಪೆಂಟಾ-1,ಐಪಿವ್ಹಿ-1, ರೋಟಾ-1, ವೈರಸ್ ಡ್ರಾಪ್ ನೀಡಲಾಗಿತ್ತು. ಆದರೆ ಮಗುವಿಗೆ ರಾತ್ರಿ ಜ್ವರ ಕಾಣಿಸಿದೆ. ಸ್ವಲ್ಪ ಹೊತ್ತಿನಲ್ಲಿಯೇ ಮಗು ಸಾವಿಗೀಡಾಗಿದೆ. ಓವರ್‌ಡೋಸ್ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮಗುವಿಗೆ ಹೃದಯ ತೊಂದರೆ ಇತ್ತು. ಲಸಿಕೆ ಪಡೆದ ಬೇರೆ ಮಕ್ಕಳಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ. ಮಗು ಆಸ್ಪತ್ರೆಗೆ ಬರುವ ಮೊದಲೇ ಸಾವಿಗೀಡಾಗಿತ್ತು ಎಂದು ಅಥಣಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಬಸಗೌಡ ಕಾಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸರಕಾರಿ ವೈದ್ಯರ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
