

ಹಿಂದೂ ಸಂಘಟನೆಗಳ ನೈತಿಕ ಪೊಲೀಸ್‌ಗಿರಿಗೆ ಬೆದರಿದ ಜೋಡಿಯೊಂದು ಪಿಜ್ಜಾ ಶಾಪೊಂದರ ಎರಡನೇ ಮಹಡಿಯಿಂದ ಹಾರಿದ ಘಟನೆ ನಡೆದಿದೆ. ಶನಿವಾರ ಸಂಜೆ ಉತ್ತರ ಪ್ರದೇಶದ ಶಹಜಾಹಾನ್‌ಪುರದ ಬರೇಲಿ ಸಮೀಪದ ಮೊರ್ಹ್ ಎಂಬಲ್ಲಿ ಈ ಘಟನೆ ನಡೆದಿದೆ. ಜೋಡಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಪಡೆದಯುತ್ತಿದ್ದಾರೆ.
ಈ ಜೋಡಿ ಕಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೋರ್ಹ್‌ನಲ್ಲಿರುವ ಪಿಜ್ಜಾ ಕೆಫೆಗೆ ಬಂದಿದ್ದು, ಅಲ್ಲಿ ನೂಡಲ್ಸ್ ಆರ್ಡರ್ ಮಾಡಿದೆ. ಅಷ್ಟರಲ್ಲಿ ಅಲ್ಲಿಗೆ ಸ್ಥಳೀಯ ಹಿಂದೂ ಸಂಘಟನೆಯ ಸದಸ್ಯರು ಬಂದಿದ್ದು, ಅವರನ್ನು ಅಲ್ಲಿಗೆ ಬಂದಿರುವ ಬಗ್ಗೆ, ಅವರ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜಾತಿ ಪ್ರಶ್ನೆ ಕೇಳಿದಾಗ ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಅವರಿಬ್ಬರು ತಾವಿಬ್ಬರು ಹಿಂದೂಗಳೇ ಎಂದು ಹೇಳಿದಾಗ ಗುಂಪು ಸುಮ್ಮನಿರಲಿಲ್ಲ.
ನಂತರ ಗುಂಪು ಜೋಡಿಯ ವಿಡಿಯೋ ಮಾಡಲು ಪ್ರಾರಂಭ ಮಾಡಿದೆ. ಇದರಿಂದ ಹೆದರಿದ ಜೋಡಿ ಭಯದಿಂದ ಅಲ್ಲಿಂದ ಓಡಿ ಹೋಗುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಆ ಗುಂಪು ಪ್ರವೇಶ ದ್ವಾರವನ್ನೇ ಬ್ಲಾಕ್ ಮಾಡಿದ್ದು, ಇದರಿಂದ ಭಯಗೊಂಡ 21 ರ ಹರೆಯದ ಯುವಕ, 19 ರ ಹರೆಯ ಹುಡುಗಿ ಕಿಟಕಿಯ ಗ್ಲಾಸ್‌ಗಳನ್ನು ಪಕ್ಕಕ್ಕಿ ಸರಿಸಿ ಅಲ್ಲಿಂದ ಕೆಳಗೆ ಹಾರಿದ್ದಾರೆ. ಪರಿಣಾಮ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.













