Crime News: ಲಾಲ್‌ಬಾಗ್‌ನಲ್ಲಿ ಹೋಳಿ ಸಂಭ್ರಮಾಚರಣೆ ಸಮಯದಲ್ಲಿ ಜಗಳ ನಡೆದಿದ್ದು, ನೇಪಾಳ ಮೂಲದ ಯುವಕರು ಸ್ಥಳೀಯ ಸೋಡಾ ವ್ಯಾಪಾರಿ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಈ ಹಲ್ಲೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೇಪಾಳಿ ಯುವಕರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ, ನೇಪಾಳ ಮೂಲದ ರಮೇಶ್ (28), ರಾಜೇಶ್ (30), ಉಮೇಶ್ (28) ಬಂಧನ ಮಾಡಿದ್ದಾರೆ.
ಮಾ.14 ರಂದು ಲಾಲ್‌ಬಾಗ್‌ನಲ್ಲಿ ಸುಮಾರು 20 ಕ್ಕೂ ಹೆಚ್ಚು ನೇಪಾಳ ಮೂಲದ ಯುವಕರು ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದರು. ಸಂಜೆ ಸುಮಾರು 4.30ಕ್ಕೆ ಲಾಲ್‌ಬಾಗ್ ಒಳಗೆ ತೆರಳಿರುವ ಯುವಕರು ಹಾಸು ಕಲ್ಲಿನ ಬಳಿ ಮತ್ತೆ ಪರಸ್ಪರ ಬಣ್ಣ ಎರಚಿಕೊಂಡು ಕೂಗಾಟ ಶುರು ಮಾಡಿದ್ದಾರೆ. ಅವರ ಮಧ್ಯೆ ಮಾತಿಗೆ ಮಾತು ಬೆಳೆದು ದೊಣ್ಣೆಯಿಂದ ಹೊಡೆದಾಡಿದ್ದಾರೆ.
ಈ ಸಂದರ್ಭದಲ್ಲಿ ಹಾಸು ಬಂಡೆ ಮೇಲೆ ಟೇಬಲ್ ಹಾಕಿ ಸೋಡಾ ಮಾರಾಟ ಮಾಡುತ್ತಿದ್ದ ಅಮರ್ ಮೇಲೆ ಯುವಕರ ಗುಂಪೊಂದು ಬಿದ್ದಾಗ ಸೋಡಾ ಬಾಟಲ್‌ಗಳು ಒಡೆದಿದೆ. ಇದರಿಂದ ಕೋಪಗೊಂಡ ಅಮರ್ ಯುವಕರನ್ನು ಪ್ರಶ್ನೆ ಮಾಡಿದ್ದಕ್ಕೆ, ಏಕಾಏಕಿ ಕೋಪಗೊಂಡ ತಂಡ ದೊಣ್ಣೆಗಳಿಂದ ಅಮರ್ ಮೇಲೆ ಹಲ್ಲೆ ಮಾಡಿದ್ದಾರೆ. ಹೆಲ್ಮೆಟ್‌ನಿಂದ ತಲೆಗೆ ಹೊಡೆದಿದ್ದಾರೆ.
ತಲೆಗೆ ಗಂಭೀರವಾಗಿ ಗಾಯಗೊಂಡ ಅಮರ್ (28) ಅಲ್ಲೇ ಕುಸಿದು ಬಿದ್ದಿದ್ದಾನೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದು, ನೇಪಾಳಿಗರ ಗುಂಪನ್ನು ಚದುರಿಸಿದ್ದಾರೆ.
