CYBER SECURITY: ಹೊಸ ವರ್ಷ 2026ರ ಸಂಭ್ರಮದಲ್ಲಿ ನಮ್ಮ ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮೆಸೇಂಜರ್ಗಳು ಶುಭ ಸಂದೇಶಗಳಿಂದ ತುಂಬಿ ತುಳುಕುತ್ತವೆ. ಸಾಮಾನ್ಯ ದಿನಗಳಲ್ಲಿ ಅಂದಾಜು 10-15 ಸಂದೇಶಗಳಿದ್ದರೆ, ಹಬ್ಬದ ದಿನ ಸಾವಿರಕ್ಕೂ ಮೀರಿ ಸಂದೇಶಗಳು ಬಂದರೂ ಅಚ್ಚರಿಯಿಲ್ಲ. ಆದರೆ, ಈ ಸಂದರ್ಭದಲ್ಲೇ ಸೈಬರ್ ಅಪರಾಧಿಗಳು ತಮ್ಮ ಕೈ ಚಳಕ ತೋರಿಸುತ್ತಾರೆ.
ಗಿಫ್ಟ್ ಲಿಂಕ್ಗಳು ಮತ್ತು ಸ್ಕ್ರ್ಯಾಚ್ ಕಾರ್ಡ್ಗಳು: “ಹ್ಯಾಪಿ ನ್ಯೂ ಇಯರ್! ನಿಮಗೆ ವಿಶೇಷ ಗಿಫ್ಟ್ ಬಂದಿದೆ” ಎಂದು ಆಕರ್ಷಣೀಯ ಸಂದೇಶಗಳೊಂದಿಗೆ ಲಿಂಕ್ಗಳು ಬರುತ್ತವೆ. ಕಂಪನಿಗಳ ಹೆಸರಿನಲ್ಲಿ (ಅಮೆಜಾನ್, ಫ್ಲಿಪ್‌ಕಾರ್ಟ್, ಗೂಗಲ್ ಪೇ ಇತ್ಯಾದಿ) ಈ ಲಿಂಕ್ಗಳನ್ನು ಕಳುಹಿಸಲಾಗುತ್ತದೆ. ಕ್ಲಿಕ್ ಮಾಡಿದ ಕೂಡಲೇ ಮಾಲ್ವೇರ್ (ಗೌಪ್ಯ ಮಾಹಿತಿಗಳ ಲೂಟಿಗಾಗಿ ಇರುವ ಒಂದು ತಂತ್ರಾಂಶ) ಡೌನ್ಲೋಡ್ ಆಗಿ ನಿಮ್ಮ ಫೋನ್ ಹ್ಯಾಕ್ ಆಗುವ ಸಾಧ್ಯತೆ ಶೇ.100ರಷ್ಟಿರುತ್ತದೆ.
APK ಫೈಲ್ಗಳು (ವಿಷಸ್.apk): “Happy New Year” ಎಂಬ ಹೆಸರಿನ APK ಫೈಲ್ಗಳು ವಾಟ್ಸ್ಆ್ಯಪ್ನಲ್ಲಿ ಫಾರ್ವರ್ಡ್ ಆಗುತ್ತವೆ. ಇದನ್ನು ತೆರೆದರೆ ಅಥವಾ ಇನ್ಸ್ಟಾಲ್ ಮಾಡಿಕೊಂಡರೆ ಫೋನ್ ಸಂಪೂರ್ಣ ಸೈಬರ್ ಕಳ್ಳರ ನಿಯಂತ್ರಣಕ್ಕೆ ಬಂದುಬಿಡುತ್ತದೆ. ಹಾಗಾಗಿ, “ಅಜ್ಞಾತ ಮೂಲದಿಂದ ಬಂದ ಯಾವುದೇ APK ಫೈಲ್ ತೆರೆಯಬೇಡಿ”.
ಸ್ಟೆನೋಗ್ರಾಫಿ ತಂತ್ರ: ಸಾಮಾನ್ಯ ಫೋಟೋ, ವಿಡಿಯೋ ಅಥವಾ ಆಡಿಯೋ ಫೈಲ್ಗಳ ಒಳಗೆ ಮಾಲ್ವೇರ್ ಅಥವಾ ಸ್ಪೈವೇರ್ ಅಡಗಿಸಿ ಕಳುಹಿಸುವುದು ಈಗ ಸಾಮಾನ್ಯ. ಫೈಲ್ ಡೌನ್ಲೋಡ್ ಮಾಡಿದ ಕೂಡಲೇ ಆಟೋ-ಎಕ್ಸಿಕ್ಯೂಟ್ ಸ್ಕ್ರಿಪ್ಟ್ ಕಾರ್ಯರೂಪಕ್ಕೆ ಬಂದು ಫೋನ್ನ ಡೇಟಾ ಕಳುವಾಗುತ್ತದೆ.
QR ಕೋಡ್ ಮತ್ತು ಫೇಕ್ ಕೊರಿಯರ್: QR ಕೋಡ್ ಸ್ಕ್ಯಾನ್ ಮಾಡಿ ಗಿಫ್ಟ್ ಪಡೆಯಿರಿ ಎಂದು ಸಂದೇಶಗಳು ಬರುತ್ತವೆ. ಇತ್ತೀಚೆಗೆ ಹೈ ನೆಟ್ ವರ್ಥ್ ಇಂಡಿವಿಜುವಲ್ಗಳ (HNI) ಮನೆಗೆ ಲೇಟೆಸ್ಟ್ ಸ್ಮಾರ್ಟ್ಫೋನ್ಗಳನ್ನು ಕೊರಿಯರ್ ಮೂಲಕ ಕಳುಹಿಸುತ್ತಾರೆ. ಆದರೆ ಅದು ಉಚಿತ ಗಿಫ್ಟ್ ಅಲ್ಲ, ಅದರೊಳಗೆ ಮಾಲ್ವೇರ್ ಪೂರ್ವನಿಯೋಜಿತವಾಗಿ ಇರುತ್ತದೆ.
ನೀವು ಏನು ಮಾಡಬೇಕು?, ಏನು ಮಾಡಬಾರದು?:
ಅಜ್ಞಾತ ಸಂದೇಶಗಳನ್ನು ಎಚ್ಚರಿಕೆಯಿಂದ ಓದಿ.ಲಿಂಕ್ಗಳ ಮೇಲೆ ಕ್ಲಿಕ್ ಮಾಡುವ ಮುನ್ನ URL ಗಮನಿಸಿ. (https:// ಇದೆಯೇ? ಕಂಪನಿಯ ಅಧಿಕೃತ ವೆಬ್ಸೈಟ್ಗೆ ಹೋಗುತ್ತದೆಯೇ?). ಫೈಲ್ ಡೌನ್ಲೋಡ್ ಮಾಡುವ ಮುನ್ನ ಎರಡು ಬಾರಿ ಯೋಚಿಸಿ.ಫೋನ್ನಲ್ಲಿ “Unknown Sources” ಆಫ್ ಮಾಡಿ. ಆ್ಯಂಟಿ ವೈರಸ್ ಆ್ಯಪ್ ಅಪ್ಡೇಟ್ ಇರಿಸಿ. ಯಾವುದೇ ಅಜ್ಞಾತ ಲಿಂಕ್ ಅಥವಾ QR ಕೋಡ್ ಸ್ಕ್ಯಾನ್ ಮಾಡಬೇಡಿ.”ಗಿಫ್ಟ್ ಬಂದಿದೆ” ಎಂಬ ಸಂದೇಶಕ್ಕೆ ತಕ್ಷಣ ರಿಯಾಕ್ಟ್ ಮಾಡಬೇಡಿ. APK ಫೈಲ್ಗಳನ್ನು ಇನ್ಸ್ಟಾಲ್ ಮಾಡಬೇಡಿ.ಯಾವುದೇ OTP ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ಶೇರ್ ಮಾಡಬೇಡಿ.
ಸೈಬರ್ ಕ್ರೈಂಗೆ ಒಳಗಾದರೆ ಏನು ಮಾಡಬೇಕು?:
ತಕ್ಷಣ 1930ಗೆ ಕರೆ ಮಾಡಿ (ಸೈಬರ್ ಕ್ರೈಂ ಹೆಲ್ಪ್ಲೈನ್) ಅಥವಾ www.cybercrime.gov.in ವೆಬ್ಸೈಟ್ನಲ್ಲಿ ದೂರು ದಾಖಲಿಸಿ.
