Dowry Death Case: ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪತಿಯನ್ನು ಶನಿವಾರ ಬಂಧನ ಮಾಡಲಾಗಿದ್ದು, ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದರಿಂದ ಆರೋಪಿ ಗಂಡ ವಿಪಿನ್ ಮೇಲೆ ಗ್ರೇಟರ್ ನೋಯ್ಡಾ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರ ಪ್ರಕಾರ, ವಿಪಿನ್ ಒಬ್ಬ ಅಧಿಕಾರಿಯಿಂದ ಪಿಸ್ತೂಲ್ ಕಸಿದುಕೊಳ್ಳಲು ಪ್ರಯತ್ನಿಸಿದಾಗ, ಸಿರ್ಸಾ ಚೌರಾಹಾ ಬಳಿ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಬಂಧನದಿಂದ ಪರಾರಿಯಾಗಲೆತ್ನಿಸಿದ್ದು, ವಿಪಿನ್. ಪೊಲೀಸರು ಆತನಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಪೊಲೀಸರು ಸರಿಯಾದ ಕೆಲಸ ಮಾಡಿದ್ದು, ಆತ ತಪ್ಪಿಸಲು ಪ್ರಯತ್ನ ಮಾಡಿದ್ದಾನೆ. ವಿಪಿನ್ ಆರೋಪಿ. ಉಳಿದವರನ್ನು ಕೂಡಾ ಹಿಡಿಯಬೇಕು ಎಂದು ನಮ್ಮ ವಿನಂತಿ ಎಂದು ಕೊಲೆಯಾದ ನಿಕ್ಕಿಯ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
30ರ ಹರೆಯದ ನಿಕ್ಕಿ ಎಂಬ ಮಹಿಳೆಯನ್ನು ಆಕೆಯ ಚಿಕ್ಕ ಮಗ ಮತ್ತು ಸಹೋದರಿಯ ಮುಂದೆಯೇ ಆಕೆಯ ಅತ್ತೆ-ಮಾವ ಚಿತ್ರಹಿಂಸೆ ನೀಡಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. “ಅವರು ನನ್ನ ತಾಯಿಯ ಮೇಲೆ ಏನನ್ನೋ ಸುರಿದು, ಕಪಾಳಮೋಕ್ಷ ಮಾಡಿ, ನಂತರ ಲೈಟರ್‌ನಿಂದ ಬೆಂಕಿ ಹಚ್ಚಿದರು” ಎಂದು ಆಕೆಯ ಆರು ವರ್ಷದ ಮಗ ಪೊಲೀಸರಲ್ಲಿ ಹೇಳಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊ ತುಣುಕುಗಳು ನಿಕ್ಕಿ ಮೇಲೆ ಹಲ್ಲೆ ನಡೆಸಿ, ಕೂದಲನ್ನು ಹಿಡಿದು ಎಳೆದಾಡಿ, ನಂತರ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಗಳ ಕೆಳಗೆ ಕುಂಟುತ್ತಾ ಇಳಿಯುವುದನ್ನು ನೋಡಬಹುದಾಗಿದೆ..
ಪದೇ ಪದೇ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸುತ್ತಿದ್ದರೂ, ನಿಕ್ಕಿಯ ಅತ್ತೆ-ಮಾವ ಕಿರುಕುಳ ನೀಡುತ್ತಲೇ ಇದ್ದರು ಎಂದು ಆಕೆಯ ತಂದೆ ಆರೋಪಿಸಿದ್ದಾರೆ. “ಮೊದಲು ಅವರು ವರದಕ್ಷಿಣೆಯಾಗಿ ಸ್ಕಾರ್ಪಿಯೋಗೆ ಬೇಡಿಕೆ ಇಟ್ಟರು, ಅದನ್ನು ನೀಡಲಾಯಿತು. ನಂತರ, ಅವರು ಬುಲೆಟ್ ಬೈಕ್ ಕೇಳಿದರು, ಮತ್ತು ಅದನ್ನೂ ನೀಡಲಾಯಿತು. ಆದರೂ, ಅವರು ನನ್ನ ಮಗಳನ್ನು ಹಿಂಸಿಸುತ್ತಲೇ ಇದ್ದರು” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಾಗಿದೆ.
