Home » Crime: ಅಂತಾರಾಜ್ಯ ನಕಲಿ ಕೀಟನಾಶಕ ಜಾಲ: 2 ಕೋಟಿ ನಕಲಿ ಕೃಷಿ ರಾಸಾಯನಿಕ ಸಹಿತ ಆರೋಪಿಯ ಬಂಧನ!

Crime: ಅಂತಾರಾಜ್ಯ ನಕಲಿ ಕೀಟನಾಶಕ ಜಾಲ: 2 ಕೋಟಿ ನಕಲಿ ಕೃಷಿ ರಾಸಾಯನಿಕ ಸಹಿತ ಆರೋಪಿಯ ಬಂಧನ!

0 comments

Crime: ನಕಲಿ ಕೃಷಿ ರಾಸಾಯನಿಕ ಮಾರಾಟ ಮಾಡುವ ಅಂತರ ರಾಜ್ಯ ಜಾಲವನ್ನು ಭೇದಿಸಿರುವ ಪೊಲೀಸರು 2 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ನಕಲಿ ಕೃಷಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಬಳ್ಳಾರಿ ಮತ್ತು ಶಿವಮೊಗ್ಗ ಸೇರಿದಂತೆ ಹನ್ನೊಂದು ರಾಜ್ಯಗಳ ವಿವಿಧೆಡೆಗಳಲ್ಲಿ ತನ್ನ ಸಹಚರರ ಮೂಲಕ ಈ ಜಾಲವನ್ನು ನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ ರಾಜೇಂದ್ರ ಚೆಚಾನಿಯನ್ನು ತೆಲಂಗಾಣ ಪೊಲೀಸರು, ರಾಜಸ್ಥಾನ ಪೊಲೀಸರ ಸಹಕಾರದೊಂದಿಗೆ ರಾಜಸ್ಥಾನದ ಚಿತ್ತೋರ್‍ಗಢ ಜಿಲ್ಲೆಯ ಬಸ್ಸಿ ಗ್ರಾಮದಲ್ಲಿರುವ ಅವರ ತೋಟದ ಮನೆಯಿಂದ ಬಂಧಿಸಿದ್ದಾಗಿ ಅಧಿಕೃತ ಮೂಲಗಳು ಹೇಳಿವೆ.

ಈತ ಏಳು ವರ್ಷಗಳಿಗೂ ಹೆಚ್ಚು ಕಾಲ ಇಂತಹ ಅತ್ಯಾಧುನಿಕ ಅಕ್ರಮ ವ್ಯಾಪಾರ ಮತ್ತು ಅಕ್ರಮ ಜಾಲವನ್ನು ನಡೆಸುತ್ತಿದ್ದ.

ಹೆಸರಾಂತ ಕೃಷಿ ರಾಸಾಯನಿಕ ಕಂಪನಿಗಳ ಲೇಬಲ್‍ಗಳನ್ನು ಹೊಂದಿರುವ ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡಿ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಚೆಚಾನಿ ಬಸ್ಸಿಯಲ್ಲಿ ಮಹೇಶ್ವರಿ ಸೀಡ್ಸ್ ಮತ್ತು ಕೀಟನಾಶಕಗಳ ಹೆಸರಿನ ಅಂಗಡಿಯನ್ನು ಹೊಂದಿದ್ದ. ದೇಶಾದ್ಯಂತ ವಿವಿಧ ನಕಲಿ ವಸ್ತು ಮಾರಾಟಗಾರರಿಗೆ ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಸಿದ್ಧಪಡಿಸಿದ ನಕಲಿ ಉತ್ಪನ್ನಗಳೆರಡರ ಪ್ರಮುಖ ಪೂರೈಕೆದಾರನಾಗಿದ್ದ ಎಂದು ವರದಿಯಾಗಿದೆ. ಜುಲೈ 2024 ರಲ್ಲಿ ಹೈದರಾಬಾದ್‍ನಲ್ಲಿ ನಕಲಿ ರಸಾಯನಿಕ ಮಾರಾಟಗಾರ ಇ. ರಾಜೇಶ್ ಅವರ ಗೋದಾಮಿನಲ್ಲಿ ನಕಲಿ ಕೀಟನಾಶಕಗಳು ಪತ್ತೆಯಾದ ನಂತರ, ಕೀಟನಾಶಕ ಕಾಯ್ದೆಯಡಿಯಲ್ಲಿ ಎಲ್‍ಬಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸಂಖ್ಯೆ 831/2024 ದಾಖಲು ಮಾಡಿಕೊಂಡು ತನಿಖೆ ನಡೆಸಿ ನಂತರ ಜಾಲವನ್ನು ಭೇದಿಸಲಾಗಿದೆ.

ಹೆಚ್ಚಿನ ತನಿಖೆಯಿಂದ ಚೆಚಾನಿ ವಿರುದ್ಧ ಹಲವಾರು ರಾಜ್ಯಗಳಲ್ಲಿ ದಾಖಲಾಗಿರುವ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿದೆ ಎಂದು ಪ್ರಕಟಣೆ ಹೇಳಿದೆ.

You may also like