3
Kalaburgi: ಅನ್ಯಕೋಮಿನ ಯುವತಿಯೋರ್ವಳನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋದ ಎನ್ನುವ ಕಾರಣಕ್ಕೆ ಗುಂಪೊಂದು ಅಡ್ಡಗಟ್ಟಿ ಹಲ್ಲೆ ಮಾಡಿ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಬೈಲಪ್ಪ (21) ಎಂಬಾತ ಹಲ್ಲೆಗೊಳಗಾದ ಯುವಕ. ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವತಿ ಆಟೋ ಸಿಗಲಿಲ್ಲ ಎನ್ನುವ ಕಾರಣಕ್ಕೆ ಡ್ರಾಪ್ ಕೊಡಲು ಕೇಳಿದ್ದು, ಬೈಕ್ ಮೇಲೆ ಕೂರಿಸಿ ಕರೆದುಕೊಂಡು ಹೋಗುತ್ತಿದ್ದಾಗ 10-15 ಜನರ ಗುಂಪು ಅಡ್ಡಗಟ್ಟಿ ಮುಸ್ಲಿಂ ಯುವತಿಗೆ ಯಾಕೆ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಿ ಎಂದು ಪ್ರಶ್ನೆ ಮಾಡಿದ್ದಾರೆ. ನಂತರ ಯುವಕನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಬೈಕ್, ಬೆಳ್ಳಿ ಚೈನ್, ಕೀ, 3.5 ಸಾವಿರ ರೂ. ಹಣವನ್ನು ಕಸಿದಿದ್ದಾರೆ.
ಯುವಕನಿಗೆ ಹೊಡೆದು ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ. ಬೈಲಪ್ಪಗೆ ಕಲಬುರಗಿ ನಗರದ ಟ್ರಾಮಾ ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಂಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
