Crime: ಕೇರಳದ ಕೊಟ್ಟಾಯಂನಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಭೀಕರ ರಾಗಿಂಗ್ ಪ್ರಕರಣ (Crime) ಬೆಳಕಿಗೆ ಬಂದಿದ್ದು, ಐವರು ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮೂವರು ಮೊದಲ ವರ್ಷದ ವಿದ್ಯಾರ್ಥಿಗಳು ಕೊಟ್ಟಾಯಂ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ರಾಗಿಂಗ್ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬಟ್ಟೆ ಬಿಚ್ಚಿ ನಿಲ್ಲುವಂತೆ ಒತ್ತಾಯಿಸಲಾಗಿದ್ದು ಮತ್ತು ಅವರ ಗುಪ್ತಾಂಗಗಳಿಗೆ ಡಂಬೆಲ್ಸ್‌ಗಳನ್ನುತೂಗು ಹಾಕಲಾಗಿತ್ತು. ಜಾಮಿಟ್ರಿ ಪೆಟ್ಟಿಗೆಯ ದಿಕ್ಸೂಚಿ ಸೇರಿದಂತೆ ಚೂಪಾದ ವಸ್ತುಗಳನ್ನು ಬಳಸಿ ಗಾಯಗಳನ್ನುಂಟು ಮಾಡಲಾಗಿದೆ.
ಅಷ್ಟೇ ಅಲ್ಲದೇ ಗಾಯಗಳಿಗೆ ಲೋಷನ್ ಹಚ್ಚಿ ನೋವುಂಟು ಮಾಡಿ, ಸಂತ್ರಸ್ತರು ವೇದನೆಯಿಂದ ಕಿರುಚಾಡಿದಾಗ, ಲೋಷನ್ ಅನ್ನು ಬಲವಂತವಾಗಿ ಅವರ ಬಾಯಿಗೆ ಸವರಲಾಗಿತ್ತು. ಹಿರಿಯ ವಿದ್ಯಾರ್ಥಿಗಳು ಈ ಕೃತ್ಯಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ದೌರ್ಜನ್ಯದ ಬಗ್ಗೆ ವರದಿ ಮಾಡಲು ಧೈರ್ಯ ಮಾಡಿದರೆ, ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅದಲ್ಲದೆ ಹಿರಿಯ ವಿದ್ಯಾರ್ಥಿಗಳು ಪ್ರತಿ ಭಾನುವಾರ ಕಿರಿಯ ವಿದ್ಯಾರ್ಥಿಗಳಿಂದ ಮದ್ಯ ಖರೀದಿಸಲು ಹಣವನ್ನು ಸುಲಿಗೆ ಮಾಡುತ್ತಿದ್ದರು. ನಿರಾಕರಿಸಿದವರನ್ನು ಥಳಿಸಲಾಗಿತ್ತು. ಕಿರುಕುಳವನ್ನು ಸಹಿಸಲಾಗದ ಒಬ್ಬ ವಿದ್ಯಾರ್ಥಿ ತನ್ನ ತಂದೆಗೆ ತಿಳಿಸಿದ್ದು, ಅವರು ನಂತರ ಪೊಲೀಸರನ್ನು ಸಂಪರ್ಕಿಸಿದ್ದರು.
ಇದೀಗ ಐವರು ವಿದ್ಯಾರ್ಥಿಗಳು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
