Kerala: ಕೇರಳದಲ್ಲಿ, ತಮಿಳುನಾಡಿನ ಮಧುರೈ ಮೂಲದ 34 ವರ್ಷದ ಮುತ್ತಪ್ಪನ್ ಎಂಬಾತ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಆಲತ್ತೂರು ಬಳಿಯ ಮೆಲಾರ್ಕೋಡ್‌ನಲ್ಲಿ ನಡೆದ ದೇವಾಲಯ ಉತ್ಸವ ಸಂದರ್ಭದಲ್ಲಿ ಚಿತ್ತೂರಿನ ವಿನೋದ್ ಅವರ ಮಗಳು ಮೂರು ವರ್ಷದ ನಕ್ಷತ್ರಾ ಎಂಬ ಮಗುವಿನ ಕುತ್ತಿಗೆಯಲ್ಲಿದ್ದ 6 ಗ್ರಾಂ ಚಿನ್ನದ ಸರವನ್ನು ಕದ್ದಿದ್ದು, ಇದನ್ನು ಬಾಲಕಿಯ ಅಜ್ಜಿ ನೋಡಿ, ಕಿರುಚಾಡಿದ್ದಾರೆ.
ಕೂಡಲೇ ಸ್ಥಳೀಯರು ಮುತ್ತಪ್ಪನ್‌ನನ್ನು ಹಿಡಿದು ಚಿನ್ನದ ಸರಕ್ಕಾಗಿ ದೇಹವೆಲ್ಲ ಹುಡುಕಾಡಿದ್ದು, ಸರ ಪತ್ತೆಯಾಗಿಲ್ಲ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ ಪೊಲೀಸರು ಎಷ್ಟೇ ವಿಚಾರಣೆ ಮಾಡಿದರೂ ಮುತ್ತಪ್ಪನ್ ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದ. ನಂತರ ಆತನನ್ನು ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಎಕ್ಸ್-ರೇ ತೆಗೆಸಿ ನೋಡಿದಾಗ ಸರ ಹೊಟ್ಟೆಯ ಒಳಗೆ ಇರುವುದು ಪತ್ತೆಯಾಗಿದೆ.
ಅದನ್ನು ಹೊರತೆಗೆಯಲು ವೈದ್ಯರು ಪಪ್ಪಾಯ, ಬಾಳೆಹಣ್ಣು ನೀಡಿದರೆ ಹೊರಗೆ ಬರುತ್ತದೆ ಎಂದು ಸಲಹೆ ನೀಡಿದರು. ಪೊಲೀಸರು ಡಜನ್‌ಗಟ್ಟಲೆ ಬಾಳೆಹಣ್ಣು ಮತ್ತು ಪಪ್ಪಾಯ ಹಣ್ಣುಗಳನ್ನು ನೀಡಿದ್ದಾರೆ. ಆತ ಹೊಟ್ಟೆ ತುಂಬಿದೆ ಎಂದರೂ ಪೊಲೀಸರು ಬಿಡುತ್ತಿಲ್ಲ.
ಬುಧವಾರ ಕೊನೆಗೂ ಚಿನ್ನ ಪತ್ತೆಯಾಗಿದೆ
ಬುಧವಾರ ಸಂಜೆ, ಆಸ್ಪತ್ರೆ ಅಧಿಕಾರಿಗಳು ದೃಢಪಡಿಸಿದಂತೆ, ಚಿನ್ನದ ಸರ ಸ್ವಾಭಾವಿಕವಾಗಿ ಹೊರತೆಗೆದರು. ಪೊಲೀಸರು ವಶಪಡಿಸಿಕೊಂಡ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿದರು ಮತ್ತು ಮರುದಿನ ಬೆಳಿಗ್ಗೆ ಕದ್ದ ವಸ್ತುವಿನ ಜೊತೆಗೆ ಶಂಕಿತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದರು.
ಈ ಪ್ರಕರಣವು ತೊಂಡಿಮುತಲುಮ್ ದೃಕ್ಷಾಕ್ಷಿಯುಮ್ ಕಥೆಯನ್ನು ಹೋಲುವ ಸಿನಿಮಾ ರೀತಿ ಇದೆ. ಈ ಕಾರಣಕ್ಕೆ ಈ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ಆ ಸಿನಿಮಾದಲ್ಲಿ ಕಳ್ಳತನದ ಆರೋಪದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಚಿನ್ನದ ಸರವನ್ನು ನುಂಗುತ್ತಾನೆ. ಪೊಲೀಸರು ಆ ವಸ್ತುವನ್ನು ಮರಳಿ ಪಡೆಯುವವರೆಗೆ ಆತನ ಮೇಲೆ ನಿಗಾ ಇಡುತ್ತಾರೆ.
