Malpe: ಮಲ್ಪೆ: ಮಂಡ್ಯದಲ್ಲಾದ್ರೆ ಇದೇ ಹಣಕ್ಕೆ ಹೆಚ್ಚು ಪಾನಿಪುರಿ ಕೊಡ್ತಾರೆ. ಆದರೆ ಬುದ್ಧಿವಂತರೆಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ ಪ್ರವಾಸಿ ತಾಣದಲ್ಲಿ ಮಾತ್ರ ಸ್ವಲ್ಪವೇ ಪಾನಿಪುರಿ ಕೊಟ್ಟು ಪ್ರವಾಸಿಗರನ್ನು ವಂಚುತ್ತೀರಿ ಎಂದು ತಗಾದೆ ತೆಗೆದ ಮಂಡ್ಯದ ಪ್ರವಾಸಿಗರ ತಂಡವೊಂದು ಮಲ್ಪೆಯ ಪಾನಿಪೂರಿ ಅಂಗಡಿಯವರಿಗೆ ಹಲ್ಲೆ ನಡೆಸಿದ ಘಟನೆ ಇಂದು ಮಲ್ಪೆಯಲ್ಲಿ ನಡೆದ ಬಗ್ಗೆ ತಿಳಿದು ಬಂದಿದೆ.

ಇಂದು ಮುಂಜಾನೆ ಮಂಡ್ಯದಿಂದ ಆಗಮಿಸಿದ ಪ್ರವಾಸಿಗರ ತಂಡವೊಂದು ಸಮುದ್ರದ ಅಲೆಗಳ ರುದ್ರ ರಮಣೀಯತೆಯ ದೃಶ್ಯವನ್ನು ವೀಕ್ಷಿಸುತ್ತ ಮನೋರಂಜನೆಗೈದ ಬಳಿಕ ಪಕ್ಕದಲ್ಲೇ ಇದ್ದ ಪಾನಿಪುರಿ ಅಂಗಡಿಗೆ ತೆರಳಿ ಪಾನಿಪೂರಿಗೆ ಆರ್ಡರ್ ಮಾಡಿತ್ತು. ಇದರಂತೆ ಪಾನಿಪುರಿ ಅಂಗಡಿಯವರು ಪಾನಿಪೂರಿ ಸಿದ್ದಪಡಿಸಿ ಪ್ರವಾಸಿಗರ ತಂಡಕ್ಕೆ ಕೊಟ್ಟಾಗ ಕ್ರೋದಗೊಂಡ ಪ್ರವಾಸಿಗರ ತಂಡ ಮಂಡ್ಯದಲ್ಲಾದರೆ ಇಷ್ಟೇ ಹಣಕ್ಕೆ ಎಷ್ಟೋ ಹೆಚ್ಚು ಪಾನಿಪೂರಿ ಕೊಡ್ತಾರೆ.
ಆದರೆ ಬುದ್ಧಿವಂತರು ಎಂದೆನಿಸಿಕೊಂಡ ನೀವು ಮಾತ್ರ ಕಡಿಮೆ ಪಾನಿಪೂರಿ ಕೊಟ್ಟು ಪ್ರವಾಸಿಗರನ್ನು ವಂಚಿಸುತ್ತಿದ್ದೀರಿ ಎಂದು ತಗಾದೆ ತೆಗೆದಿತ್ತೆನ್ನಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಪ್ರವಾಸಿಗರ ತಂಡ ಏಕಾಏಕಿ ಪಾನಿಪೂರಿ ಅಂಗಡಿಯವರ ಮೇಲೆ ಹಲ್ಲೆಗೆ ಮುಂದಾಗಿ ಪರಸ್ಪರ ಸಿನಿಮಾ ಶೈಲಿಯ ಹೊಡೆದಾಟಗಳು ನಡೆದವೆನ್ನಲಾಗಿದೆ. ಈ ವೇಳೆ ಸ್ಥಳೀಯರು ತಕ್ಷಣ ಮಲ್ಪೆ ಠಾಣೆಗೆ ದೂರು ನೀಡಿದ ಪ್ರಕಾರ ಸ್ಥಳಕ್ಕೆ ಭಾವಿಸಿದ ಪೊಲೀಸರು ಈ ತಂಡಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
