Crime: ಒಡಿಶಾ ಮೂಲದ ವ್ಯಕ್ತಿಯೋರ್ವ ತನ್ನೂರಿನಿಂದ ಗಾಂಜಾವನ್ನು ತಂದು ಪೊನ್ನಂಪೇಟೆ ತಾಲೂಕು ಕಾನೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊನ್ನಂಪೇಟೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗುತ್ತಿಗೆದಾರರೊಬ್ಬರ ಬಳಿ ರಿಂಗ್ ಕೆಲಸ ನಿರ್ವಹಿಸುತ್ತಿದ್ದ, ಮೂಲತಃ ಒಡಿಶಾ ರಾಜ್ಯದ ಸಿರಿಂಗಿಂ ಗ್ರಾಮದ ಸಂಜಯ್ ನಾಯಕ್ ಎಂಬಾತ ಆರೋಪಿಯಾಗಿದ್ದು ಈತನಿಂದ 3 ಕೆ.ಜಿ. 250 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ.
ಈತ ಪ್ರತಿ ವರ್ಷ 3 – 4 ಬಾರಿ ತನ್ನ ಊರಿಗೆ ತೆರಳಿ ಅಲ್ಲಿಂದ ಹಿಂತಿರುಗಿ ಬರುವಾಗ ಅಲ್ಲಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಗ್ಗೆ ಸುಳಿವು ಅರಿತ ಪೊನ್ನಂಪೇಟೆ ಪೊಲೀಸರು
ಈತನ ಬಂಧನಕ್ಕಾಗಿ ಹಲವು ದಿನಗಳಿಂದ ಬಲೆ ಬೀಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ತನ್ನ ತವರೂರಿಗೆ ತೆರಳಿದ್ದ ಈತ ಗಾಂಜಾದೊಂದಿಗೆ ಇಂದು ಮರಳಿ ಕಾನೂರು ಬಸ್ ನಿಲ್ದಾಣದಲ್ಲಿ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
